ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಪಕ್ಕದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಸ್ಫೋಟದಂತಹ ಸದ್ದಿನೊಂದಿಗೆ ಬೃಹತ್ ಕಲ್ಲುಬಂಡೆಗಳು ಉರುಳಿಬಿದ್ದಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಸಮೀಪವಿರುವ ಬ್ರಹ್ಮಗಿರಿ ಬೆಟ್ಟದ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಯೊಂದು ಆಕಸ್ಮಿಕವಾಗಿ ಮುರಿದು ಕಣಿವೆಯತ್ತ ಉರುಳಿಬಿದ್ದಿದೆ. ಈ ವೇಳೆ ಭಾರೀ ಸ್ಫೋಟದಂತಹ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ದೃಶ್ಯ!
ಬೆಟ್ಟದ ಮೇಲಿನಿಂದ ಬೃಹತ್ ಕಲ್ಲುಬಂಡೆಗಳು ಕೆಳಗೆ ಉರುಳುತ್ತಿರುವ ದೃಶ್ಯವನ್ನ ಕಣಿವೆಪುರ ಗ್ರಾಮದ ಸಮೀಪದಿಂದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಬಂಡೆಗಳು ಉರುಳುವಾಗ ಭಾರೀ ಪ್ರಮಾಣದಲ್ಲಿ ಧೂಳು ಮೇಲೇಳುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.
ತಪ್ಪಿದ ಭಾರೀ ಅನಾಹುತ!
ಅದೃಷ್ಟವಶಾತ್ ಬಂಡೆಗಳು ಉರುಳಿಬಿದ್ದ ಸಂದರ್ಭದಲ್ಲಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ದನಗಾಹಿಗಳು ಹಾಗೂ ಕುರಿಗಾಹಿಗಳು ಯಾರೂ ಇರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಈ ಘಟನೆ ಸಂಭವಿಸಿದೆ. ಬೃಹತ್ ಬಂಡೆಗಳು ಆಕಸ್ಮಿಕವಾಗಿ ಮುರಿದು ಬೀಳಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಭಾರೀ ಸ್ಫೋಟದಂತಹ ಸದ್ದಿನೊಂದಿಗೆ ಬಂಡೆಗಳು ಉರುಳಿರುವ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಗತ್ಯ ಎದುರಾಗಿದೆ.
Laxmi News 24×7