ಬಳ್ಳಾರಿ, : ಬಳ್ಳಾರಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಜಿಲ್ಲಾಧಿಕಾರಿ ನಕುಲ್ ಅವರು ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 1019 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸೋಂಕಿತರ ಸಾವಿನ ಪ್ರಮಾಣ ಎರಡಂಕಿ ದಾಟಿದೆ.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನಷ್ಟು ಕಠಿಣ ಸಮಯ ಎದುರಾಗಬಹುದು. ಇದಕ್ಕೆ ಬ್ರೇಕ್ ಹಾಕಲು ಜನರೇ ಮುಂದೆ ಬಂದಿದ್ದು, ಇಂದಿನಿಂದ ಒಂದು ವಾರಗಳ ಕಾಲ ಮಧ್ಯಾಹ್ನ ಮೂರು ಗಂಟೆ ನಂತರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಒಂದು ವಾರದಿಂದೀಚೆಗೆ ಸೋಂಕಿತರ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದೆ.
ಸಾವಿನ ಪ್ರಮಾಣವೂ ಹೆಚ್ಚಿದೆ. ಜಿಲ್ಲಾಡಳಿತ ಅದೆಷ್ಟೇ ಪ್ರಯತ್ನ ಮಾಡಿದರೂ ಜನರು ಮಾಸ್ಕ್ ಹಾಕುವುದಾಗಲಿ, ಅನಗತ್ಯ ಓಡಾಡುವುದನ್ನಾಗಲೀ ನಿಲ್ಲಿಸಿಲ್ಲ. ಹೀಗಾಗಿ ಬಳ್ಳಾರಿ ನಗರದ ವ್ಯಾಪಾರಸ್ಥರು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದು, ಇಂದಿನಿಂದ ಒಂದು ವಾರದವರೆಗೆ ಔಷಧಿ ಅಂಗಡಿ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಂಜಾನೆ ಏಳು ಗಂಟೆಗಳಿಂದ ಮಧ್ಯಾಹ್ನ ಮೂರು ಗಂಟೆವರೆಗೆ ಮಾತ್ರೆ ತೆರೆಯಲು ಮುಂದಾಗಿದ್ದಾರೆ.
ಈ ಹಿಂದೆ ಸರ್ಕಾರ ಒತ್ತಾಯದ ಲಾಕ್ ಡೌನ್ ಹೇರಿತ್ತು. ಆಗ ಜಿಲ್ಲೆಯ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆತಂಕ ಶುರುವಾಗಿದೆ. ಹೀಗಾಗಿ ಈ ಸ್ವಯಂ ಪ್ರೇರಣೆಯ ಲಾಕ್ ಡೌನ್ ಬಹುತೇಕ ಯಶಸ್ವಿಯಾಗುವುದು ಖಚಿತ ಎನಿಸಿದೆ.