ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆಗೈದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿ ಶಿವಮೊಗ್ಗದಲ್ಲಿ ಇಂದು ಸರಣಿ ಪ್ರತಿಭಟನೆಗಳು ನಡೆದವು.
ಜಿಲ್ಲಾ ವಕೀಲ ಸಂಘ ಹಾಗೂ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಅವರು ಪ್ರತಿಭಟನೆ ನಡೆಸಿದರೆ, ಜಿಲ್ಲಾ ಕಾಂಗ್ರೆಸ್ನ ಉತ್ತರ ಬ್ಲಾಕ್ನ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು.
ಜಿಲ್ಲಾ ವಕೀಲರ ಸಂಘವು ಜಿಲ್ಲಾ ವಕೀಲರ ಭವನದಿಂದ ಬಾಲರಾಜ್ ರಸ್ತೆಯಲ್ಲಿ ಸಾಗಿ ಮಹಾವೀರ ವೃತ್ತದ ಮೂಲಕ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಪ್ರವಾಸಿಗರನ್ನು ಕೊಂದವರಿಗೆ ಸೂಕ್ತ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮರ್ಕಜಿ ಸುನ್ನಿ ಜಾಮೀಯಾ ಮಸ್ಜಿದ್ ಕಮಿಟಿಯವರು ಉಗ್ರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಭಾರತೀಯ ಪ್ರಜೆಗಳನ್ನು ಉಗ್ರವಾದಿಗಳು ಅವರ ಕುಟುಂಬದವರ ಮುಂದೆಯೇ ಗುಂಡು ಹಾರಿಸಿ ಕೊಂದಿದ್ದಾರೆ. ಇದು ಮಾನವ ಸಮಾಜವೇ ತಲೆ ತಗ್ಗಿಸುವಂಥದ್ದು. ಉಗ್ರವಾದಿಗಳಿಗೆ ಯಾವುದೇ ಜಾತಿ, ಧರ್ಮಗಳಿಲ್ಲ. ಮಾನವಿಯತೆ ಇಲ್ಲದ ಇಂತಹವರನ್ನು ಭಾರತ ಸರ್ಕಾರ ಹುಡುಕಿ ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಉಗ್ರರಿಂದ ಹತ್ಯೆಯಾದವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು.
Laxmi News 24×7