ಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ ತನ್ನತ್ತ ತಿರುಗಿ ನೋಡಬೇಕೆಂಬ ಅಧಮ್ಯ ವಿಶ್ವಾಸ. ತಂದೆ – ತಾಯಿಗೆ ಮಗನ ಮೇಲೆ ಬೆಟ್ಟದಷ್ಟು ನಿರೀಕ್ಷೆ. ಅದು ಹುಸಿ ಆಗಲಿಲ್ಲ. ಸತತ ಓದು, ಪರಿಶ್ರಮ ಆತನ ಕೈ ಹಿಡಿದಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ 910ನೇ ರ‍್ಯಾಂಕ್ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೌದು, ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದಿದ್ದಾರೆ. ಯುಪಿಎಸ್ಸಿಯಲ್ಲಿ ಮಗ ಪಾಸ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕೊಡ್ಲಿವಾಡದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಪ್ಪ ಯಲ್ಲಪ್ಪ, ಅವ್ವ ಕಾಳವ್ವ, ಪತ್ನಿ ಯಶೋಧಾ, ಸಹೋದರ ಆನಂದ ಸೇರಿ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲ. ಅಲ್ಲದೇ ಇಡೀ ಊರಿಗೆ ಊರೇ ಹನುಮಂತನ ಸಾಧನೆಗೆ ಹೆಮ್ಮೆ ಪಡುತ್ತಿದೆಬಡತನ ಮೀರಿ ಪರೀಕ್ಷೆ ಪಾಸ ಮಾಡಿದ ಹಳ್ಳಿ ಹೈದ: ಹನುಮಂತ ಅವರ ಅಪ್ಪ ಮತ್ತು ಸಹೋದರ ಕುರಿ ಕಾಯುತ್ತಾ ಕೃಷಿ ಕಾಯಕ ಮಾಡುತ್ತಾರೆ. ಅವ್ವ ಅವರಿಗೆ ಸಹಾಯ ಮಾಡುತ್ತಾರೆ. ಯಾವುದೇ ಯುಪಿಎಸ್ಸಿ ಹಿನ್ನೆಲೆ ಇಲ್ಲ. ಮನೆಯಲ್ಲಿ ಬಡತನ ಹಾಸಿ ಹೊದ್ದಿದೆ. ಎಲ್ಲವನ್ನು ಮೆಟ್ಟಿ ನಿಂತು ಹನುಮಂತ ಯುಪಿಎಸ್ಸಿ ಪಾಸ್ ಆಗುವ ಮೂಲಕ ತಂದೆ-ತಾಯಿ ಹೆಮ್ಮೆ ಪಡುವ ಸಾಧನೆಗೈದಿದ್ದಾರೆ
Laxmi News 24×7