ಬೆಂಗಳೂರು: ಬಿಡದಿಯ ಬೈರಮಂಗಲದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ರೈತರ ಮೇಲೆ ಅಮಾನುಷವಾಗಿ ದಬ್ಬಾಳಿಕೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ; ‘ಹಿರಣ್ಯಾಕ್ಷ’ನ ಪಾಪದ ಕೊಡ ತುಂಬುತ್ತಿದೆ ಎಂದು ಗುಡುಗಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ನಾಗರಿಕ ಸರ್ಕಾರವಿದೆಯೋ ಅಥವಾ ರಾಕ್ಷಸ ಸರ್ಕಾರ ಇದೆಯೋ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ತಮ್ಮ ಭೂಮಿ ಉಳಿಸಿಕೊಳ್ಳಲು ಬಿಡದಿಯ ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಅವರ ಮೇಲೆ ಬಲಪ್ರಯೋಗ ಮಾಡಿ ಹತ್ತಿಕ್ಕಲೆತ್ನಿಸಿದ ದುಷ್ಕ್ರೃತ್ಯ ಖಂಡನಾರ್ಹ. ಬಿಡದಿಯ ಭೈರಮಂಗಲದಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ ‘ದೈವದ್ರೋಹ’ಕ್ಕೂ ಮೀರಿದ್ದು ಎಂದು ಕಿಡಿಕಾರಿದ್ದಾರೆ.
ಧರಣಿ ಕೂರಲು ಪೆಂಡಾಲ್ ಹಾಕಲೆತ್ನಿಸಿದಾಗ ಅದನ್ನು ಕಿತ್ತುಕೊಂಡು ಅನ್ನದಾತರನ್ನು ಉರಿಬಿಸಿಲಿನಲ್ಲೇ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯ. ಇಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಿಡದಿ ಭೂಮಿ ‘ರಿಯಲ್ ಎಸ್ಟೇಟ್ ವ್ಯಾಪಾರಿ’ ಕಪಿಮುಷ್ಟಿಗೆ ಸಿಲುಕಿದೆ. ನೆನಪಿರಲಿ, ‘ಹಿರಣ್ಯಾಕ್ಷ’ನ ಪಾಪದ ಕೊಡ ತುಂಬುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Laxmi News 24×7