Breaking News
Home / ಜಿಲ್ಲೆ / ಒಂದು ತಿಂಗಳು ಪೂರ್ಣಗೊಳಿಸಿದ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನ:ಅಶೋಕ ಚಂದರಗಿ

ಒಂದು ತಿಂಗಳು ಪೂರ್ಣಗೊಳಿಸಿದ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನ:ಅಶೋಕ ಚಂದರಗಿ

Spread the love

ಬೆಳಗಾವಿ :1991 ರಲ್ಲಿ ಅಸ್ತಿತ್ವಕ್ಕೆ ಬಂದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ ನಾಡು,ನುಡಿ,ಗಡಿ ಹಿತಾಸಕ್ತಿಗೆ ಸಂಬಂಧಿಸಿದ ನೂರಾರು ಹೋರಾಟಗಳನ್ನು ಮಾಡುತ್ತ ಬಂದಿದೆ.ಜೊತೆಗೆ ಅನೇಕ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೂ ಶ್ರಮಿಸಿದ್ದು ಈ ನಾಡಿಗೆ ಗೊತ್ತಿದೆ.
ನೆರೆಹಾವಳಿ,ಬರಗಾಲ ಮತ್ತಿತರ ನೈಸರ್ಗಿಕ ವಿಕೋಪದ ಕಾಲಕ್ಕೂ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಲೇ ಬಂದಿದೆ.
2018 ರ ಅಗಷ್ಟ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯಿಂದಾಗಿ ಆದ ಅಪಾರ ಪ್ರಮಾಣದ ಹಾನಿಯ ಸಂದರ್ಭದಲ್ಲೂ ಬೆಳಗಾವಿಯಿಂದ ಅಗತ್ಯ ವಸ್ತುಗಳನ್ನು ಒಯ್ದು ವಿತರಿಸಿದೆ.
2019 ರ ಜುಲೈದಿಂದ ನವ್ಹೆಂಬರ್
ಅವಧಿಯಲ್ಲಿ ಉಂಟಾದ ಭಾರೀ ಪ್ರವಾಹದಲ್ಲಿ ಆಪತ್ತಿಗೆ ಸಿಲುಕಿದ ನೂರಾರು ಜನರ ನೆರವಿಗೆ ಕ್ರಿಯಾ ಸಮಿತಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ.


ಈ ವರ್ಷದ ಮಾರ್ಚ ತಿಂಗಳಲ್ಲಿ ಕೊರೋನಾ ವೈರಾಣು ವಿಶ್ವವನ್ನೇ ನಡುಗಿಸಿದೆ.ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿರುವ ಲಕ್ಷಾಂತರ ಕುಟುಂಬಗಳು ಹಸಿವೆಯಿಂದ ವಿಲವಿಲ ಒದ್ದಾಡುತ್ತಿವೆ.ಕೊರೋನಾದಿಂದ ಸಾವು ಬರಬಾರದೆಂಬುದು ಎಷ್ಟು ಮುಖ್ಯವೊ ಹಸಿವೆಯಿಂದಲೂ ಸಾವು ಸಂಭವಿಸಬಾರದೆಂಬುದೂ ಸಹ ಅಷ್ಟೇ ಮುಖ್ಯವಾಗಿದೆ.


ಬೆಳಗಾವಿಯ ಕಿಲ್ಲಾ ಕೆರೆಯ ಬಳಿ ಒರಳು,ಬೀಸುವ ಕಲ್ಲುಗಳನ್ನು ಕಟೆಯುವ ಇಪತ್ತು ಗುಡಿಸಲುವಾಸಿಗಳು 72 ಗಂಟೆಗಳ ಕಾಲ ಅನ್ನವಿಲ್ಲದೇ ನೀರಿನ ಮೇಲೆಯೇ ಬದುಕಿದ ಘಟನೆ ಟಿವ್ಹಿಗಳಲ್ಲಿ ವರದಿಯಾಗುತ್ತಲೇ ನನ್ನ ಕರುಳು ಚುರುಕ್ ಎಂದಿತು.ಕೂಡಲೇ ಸ್ಥಳಕ್ಕೆ ಧಾವಿಸಿ ಆಹಾರ ಧಾನ್ಯ ವಿತರಿಸಿ ಬಂದೆ.
ಈ ಘಟನೆ ಮತ್ತು ಆಹಾರ ಧಾನ್ಯ ವಿತರಣೆಯನ್ನು ತಿಳಿದ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ಮತ್ತು ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ಅವರು ನನ್ನ ಬೆನ್ನಿಗೆ ನಿಂತರು.ಪ್ರೋತ್ಸಾಹಿಸಿದರು.ತಮ್ಮ ಮಠಗಳಿಂದಲೂ ಆಹಾರ ಧಾನ್ಯ ಕಿಟ್ ಗಳನ್ನು ತಯಾರಿಸಿ ಹಂಚಲು ಆರಂಭಿಸಿದರು.


ಹಸಿದವರಿಗೆ ಆಹಾರ ಧಾನ್ಯ ವಿತರಣೆ ಕಾರ್ಯಕ್ಕೆ ದಾನಿಗಳೂ ಮುಂದೆ ಬಂದರು.ಅಕ್ಕಿ,ಜೋಳ,ತೊಗರಿ ಬೇಳೆ,ಸಕ್ಕರೆ,ಚಹಾಪುಡಿ,ಎಣ್ಣೆ,ಗೋಧಿ ಹಿಟ್ಟು ಕೊಡಿಸಿದರು.ನಮ್ಮ ಬ್ಯುಜಿನೆಸ್ ಕಚೇರಿಯ ಟಾಟಾ ಸುಮೊ ಮತ್ತು ಓಮ್ನಿ ಕಾರು ಓಡಾಡತೊಡಗಿದವು.ನಮ್ಮ ಮನೆ ಮತ್ತು ಕಚೇರಿಗಳೇ ಆಹಾರ ಧಾನ್ಯ ಕಿಟ್ ತಯಾರಿಸುವ ಕೇಂದ್ರಗಳಾಗಿವೆ.


ಬೆಳಗಾವಿ ಬಳಿಯ ಕಾಕತಿಯಿಂದ ಹಿಡಿದು ಪೀರನವಾಡಿಯ ಹುಂಚಾನಟ್ಟಿಯವರೆಗೆ,ಕಣಬರ್ಗಿಯಿಂದ ಲಕ್ಷ್ಮೀಟೇಕಡಿವರೆಗೆ,ಶಹಾಪೂರ,ವೈಭವ ನಗರ,ಶಾಹೂನಗರ,ಸದಾಶಿವನಗರ,
ಹನುಮಾನನಗರ,ವಡಗಾವಿ ಮುಂತಾದ ಕಡೆಗಳಲ್ಲಿ ಆಹಾರಧಾನ್ಯ ವಿತರಿಸಲಾಗಿದೆ.ಮಧ್ಯಮ ವರ್ಗದ ನಾಗರಿಕರಿಗೂ ಹಂಚಲಾಗಿದೆ.ಖಾನಾಪುರ
ತಾಲೂಕಿನ ದೇವರಾಯಿ ಗ್ರಾಮದವರೆಗೂ ನನ್ನ ಗೆಳೆಯರು ತಲುಪಿಸಿದ್ದಾರೆ.
ಸಂಕಷ್ಟದಲ್ಲಿರುವ ಒಂದೇ ಕುಟುಂಬ ಎಷ್ಟೇ ದೂರವಿದ್ದರೂ ತಲುಪಿಸಲಾಗಿದೆ.ಉದ್ಯೋಗದಲ್ಲಿರುವ ಯುವತಿಯರು ಪಿಜಿ ಯಲ್ಲಿದ್ದಾರೆ.ಸದ್ಯ ಏನೂ ಇಲ್ಲದೇ ತೀವ್ರ ತೊಂದರೆಯಲ್ಲಿದ್ದಾರೆ.ಅವರಿಗೂ ಸಹ ಕೊಡಲಾಗಿದೆ.ಪತ್ರಿಕಾ ರಂಗದಲ್ಲಿದ್ದು ಸಂಕಷ್ಟದಲ್ಲಿರುವ ಅನೇಕರನ್ನು ನಾವೇ ಗುರುತಿಸಿ ವಿನಮ್ರದಿಂದಲೇ ತಲುಪಿಸುತ್ತಿದ್ದೇವೆ.ಕೆಲವು ಪೋಲೀಸರಿಗೂ ಆಹಾರಧಾನ್ಯ ತಲುಪಿದೆ.


ಸಂಕಷ್ಟದಲ್ಲಿರುವ ಕುಟುಂಬಗಳ ಪಟ್ಟಿಯು ದಿನೇ ದಿನೇ ಬೆಳೆಯುತ್ತಿದೆ.ಎಲ್ಲರನ್ನೂ ಸಮಾಧಾನಪಡಿಸುವದು ಸಾಧ್ಯವಿಲ್ಲ.ಸರಕಾರ ರೇಶನ್ ಅಂಗಡಿಗಳಲ್ಲಿ ಬಿಪಿಎಲ್ ಜೊತೆಗೆ ಎಪಿಎಲ್ ಕುಟುಂಬದವರಿಗೂ ಅಕ್ಕಿ ಕೊಡಲು ಆರಂಭಿಸಿದೆ.ಆದರೆ ಎಣ್ಣೆ,ಸಕ್ಕರೆ,ಚಹಾಪುಡಿ,ತೊಗರಿ ಬೇಳೆಯೂ ಅವಶ್ಯ.ಈ ಸಾಮಾನುಗಳನ್ನು ಕೊಡುವ ಯತ್ನವನ್ನೂ ನಮ್ಮ ಸಂಘಟನೆ ಮಾಡುತ್ತಿದೆ.
ಈ ನಮ್ಮ ಅಭಿಯಾನಕ್ಕೆ ದಾನಿಗಳು ಮುಂದೆ ಬರಬೇಕು.ಹಸಿದ ಹೊಟ್ಟೆಗಳಿಗೆ ಅನ ಹಾಕುವ ಸತ್ಕಾರ್ಯಕ್ಕೆ ಮುಂದಾಗಬೇಕು.ದಾನಿಗಳು ಬೆಳಗಾವಿಯ ಯಾವದೇ ಅಂಗಡಿಗಳಲ್ಲಿ ಆಹಾರಧಾನ್ಯ ಖರೀದಿಸಿಟ್ಟರೂ ನಮ್ಮ ವಾಹನಗಳು ಸಂಗ್ರಹಿಸುತ್ತವೆ.

ನಮ್ಮ ಈ ಅಭಿಯಾನ ಮುಂದುವರೆಯುತ್ತದೆ.ತಮ್ಮೆಲ್ಲರ ಸಹಕಾರ,ಬೆಂಬಲ ನೀಡಬೇಕೆಂದು
ಕೋರುತ್ತೇನೆ.

ಮಾರ್ಚ 20 ರಿಂದ ಎಪ್ರೀಲ್ 20 ರವರೆಗಿನ ಅವಧಿಯಲ್ಲಿ ಸುಮಾರು 500 ರಿಂದ 600 ಬಡಕುಟುಂಬಗಳಿಗೆ,ಆಲೆಮಾರಿ ಗುಡಿಸಲುವಾಸಿಗಳಿಗೆ,ದುರ್ಗಮುರ್ಗಿ,ಸುಡುಗಾಡು ಸಿದ್ಧರ,ಲಂಬಾಣಿ ತಾಂಡಾಗಳ ಕೂಲಿಕಾರರಿಗೆ ಆಹಾರ ಧಾನ್ಯ ವಿತರಿಸಲಾಗಿದೆ.ಇನ್ನೂ ಸಾವಿರಾರು ಕುಟುಂಬಗಳ ಪಟ್ಟಿಯೇ ನಮ್ಮಲ್ಲಿದೆ.
ದಾನಿಗಳು ದಯವಿಟ್ಟು ಮುಂದೆ ಬನ್ನಿ.
ಅಶೋಕ ಚಂದರಗಿ,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ.( 9620114466
9448114466)


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ