ನವದೆಹಲಿ: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗುವ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವುದಷ್ಟೇ ಸಮಸ್ಯೆಗೆ ಪರಿಹಾರವಲ್ಲ; ಅಪರಾಧ ಎಸಗುವ ದುರುಳರ ಮನಸ್ಸಿನಲ್ಲಿ ಕಾನೂನಿನ ಭಯ ಹುಟ್ಟಿಸುವುದೇ ನಿಜವಾದ ಪರಿಹಾರ ಎಂದು ಸುಪ್ರೀಂ ಕೋರ್ಟ್) ಹೇಳಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳನ್ನು (Rape Case) ಸ್ವಯಂಪ್ರೇರಿತವಾಗಿ (Suo Motu) ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್ ದೆಹಲಿ ಮಹಿಳೆಯರ ಸುರಕ್ಷತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿತು. ನಾವು ಭಾರತದಂತಹ ದೇಶದಲ್ಲಿದ್ದೇವೆ. ನಿಯಮಗಳು ಕೇವಲ ಕಾಗದದ ಮೇಲಿದ್ದರೆ ಸಾಲದು, ಪೊಲೀಸರು ನೇರವಾಗಿ ಕಣಕ್ಕಿಳಿದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತು.
ಅಪರಾಧಿಗಳನ್ನು ಮಟ್ಟಹಾಕಲು ನೀವು ಸ್ವಲ್ಪ ಕಠಿಣವಾಗಬೇಕಾದರೆ, ನಿರ್ದಯವಾಗಬೇಕಾದರೆ ಹಿಂಜರಿಯಬೇಡಿ. ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಉಲ್ಲಂಘನೆಯಾಗುತ್ತಿದೆ ಎಂದು ಕೆಲವರು ಬೊಬ್ಬೆ ಹೊಡೆಯಬಹುದು. ಆದರೆ ನೀವು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಪೊಲೀಸರಿಗೆ ಸ್ಪಷ್ಟಪಡಿಸಿತು.
ಇನ್ನೇನಾದರೂ ತಪ್ಪು ಮಾಡಿದರೆ ನಮ್ಮ ಕಥೆ ಮುಗಿಯಿತು ಎಂಬ ಭಯ ಸಮಾಜಘಾತುಕ ಶಕ್ತಿಗಳ ಎದೆಯಲ್ಲಿ ಮೂಡುವವರೆಗೂ ಇಂತಹ ಕೃತ್ಯಗಳು ನಿಲ್ಲುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ದಕ್ಷಿಣ ದೆಹಲಿಯ ಹೆಣ್ಣುಮಕ್ಕಳ ಕಾಲೇಜಿನಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಉದ್ಯಾನವನವೊಂದರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿ ಪೊಲೀಸರ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿತು. ಆ ದುರದೃಷ್ಟಕರ ಘಟನೆಯಲ್ಲಿ ಭಾಗಿಯಾದ ಅಪರಾಧಿಗಳ ಬಗ್ಗೆ ಸ್ಥಳೀಯರು ನಿಮಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ. ಹಾಗಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿತು.
ದುರ್ಗಾಪೂಜೆ, ದೀಪಾವಳಿಯಂತಹ ಹಬ್ಬದ ದಿನಗಳಲ್ಲಿ ಇಂತಹ ಪುಂಡರು ಮತ್ತು ಸಮಾಜಘಾತುಕರು ಬೀದಿಗಿಳಿದು ಅತಿರೇಕ ತೋರುವ ಸಾಧ್ಯತೆ ಹೆಚ್ಚು. ಇಂಥವರ ಎದೆಯಲ್ಲಿ ಕಾನೂನಿನ ಭೀತಿ ಮೂಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ನಗರದಾದ್ಯಂತ ಕಣ್ಗಾವಲು ವ್ಯವಸ್ಥೆಯನ್ನು ತೀವ್ರಗೊಳಿಸಲು ಸೂಚಿಸಿದ ನ್ಯಾಯಾಲಯ, ಮಹಿಳೆಯರು ಹೆಚ್ಚಾಗಿ ಸಂಚರಿಸುವ ಮತ್ತು ಸೂಕ್ಷ್ಮವೆನಿಸುವ ಸ್ಥಳಗಳ ಮೇಲೆ ವಿಶೇಷ ನಿಗಾ ಇರಿಸುವಂತೆ ಆದೇಶಿಸಿತು
ಬಸ್ ನಿಲ್ದಾಣಗಳು, ಮೆಟ್ರೋ ಹಾಗೂ ರೈಲ್ವೆ ನಿಲ್ದಾಣಗಳು, ಶಾಲೆಗಳು ಮತ್ತು ಕಾಲೇಜು ಪರಿಸರಗಳು, ಉದ್ಯಾನವನಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕೇವಲ ಸಿಸಿಟಿವಿ ಅಳವಡಿಸಿದರೆ ಸಾಲದು. ಆ ದೃಶ್ಯಾವಳಿಗಳನ್ನು ದಿನದ 24 ಗಂಟೆಯೂ ನಿರಂತರವಾಗಿ ಪರಿಶೀಲಿಸಲು ಮೀಸಲಾದ ಪ್ರತ್ಯೇಕ ಕಂಟ್ರೋಲ್ ರೂಮ್ ಇರಬೇಕು ಎಂದು ನಿರ್ದೇಶಿಸಿತು.
ಕಿಡಿಗೇಡಿಗಳು ಜಮಾಯಿಸಿ ಮದ್ಯ ಸೇವಿಸುವ ನಗರದ ಸಾವಿರಾರು ಅಕ್ರಮ ತಿನಿಸು ಕೇಂದ್ರಗಳು ಮತ್ತು ಡಾಬಾಗಳ ಮೇಲೆ ತಕ್ಷಣವೇ ಕಠಿಣ ನಿಗಾ ವಹಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
Laxmi News 24×7