ಬೆಳಗಾವಿ : ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯವನ್ನು ರದ್ದುಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿದ್ದರಿಂದ ಅಗತ್ಯ ಪ್ರಮಾಣದ ಗೊಬ್ಬರ ಪಡೆಯಲು ತೊಂದರೆಯಾಗುತ್ತಿದೆ. ಈ ನಿಯಮ ರದ್ದುಪಡಿಸಿ ಸುಲಭವಾಗಿ ರಸಗೊಬ್ಬರ ದೊರಕಿಸಿಕೊಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲಿಸಿ, ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದ್ದು, ರೈತ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ. ಇಂತಹ ಯಾವುದೇ ನಿರ್ಧಾರ ಮಾಡಬಾರದು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಘೋಷಿಸುತ್ತಿರುವ ಅವೈಜ್ಞಾನಿಕ ಎಫ್‌ಆರ್‌ಪಿಯಿಂದ ರೈತರಿಗೆ ನ್ಯಾಯ ಸಿಗುತ್ತಲ್ಲ. ಉತ್ಪಾದನಾ ವೆಚ್ಚ, ಕಾರ್ಮಿಕ ವೆಚ್ಚ, ರಸಗೊಬ್ಬರ, ಡೀಸೆಲ್ ಹಾಗೂ ಇತರೆ ಕೃಷಿ ಖರ್ಚುಗಳನ್ನು ಪರಿಗಣಿಸಿ ವೈಜ್ಞಾನಿಕ ಹಾಗೂ ಲಾಭದಾಯಕ ಬೆಲೆ ನಿಗದಿಪಡಿಸಬೇಕು. 2025-26ನೇ ಸಾಲಿನ ಸುಮಾರು 1,500ಕೋಟಿಯಷ್ಟು ರೈತರ ಕಬ್ಬಿನ ಬಿಲ್ ಬಾಕಿಯಿದ್ದು, ಅದನ್ನು ಕೂಡಲೇ ರೈತರಿಗೆ ಜಮೆ ಮಾಡಬೇಕು. ವೀರಭದ್ರೇಶ್ವರ ಏತ ನೀರಾವರಿ ಹಾಗೂ ಬಸವೇಶ್ವರ ಏತನೀರಾವರಿ ಯೋಜನೆಗಳ ಸಂತ್ರಸ್ತ ರೈತರಿಗೆ ಪರಿಹಾರದಲ್ಲಿ ವಿಳಂಬವಾಗಿದ್ದು, ಇದನ್ನು ಬಗೆಹರಿಸಿ ಕಾಮಗಾರಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಗುರುಸಿದ್ಧಪ್ಪ ಕೊಟಗಿ, ರಮೇಶ ಹಿರೇಮಠ, ಬಾಪುಗೌಡ ಪಾಟೀಲ, ಮಂಜು ಬಾಳೆಕುಂದರಗಿ, ಎಸ್.ಬಿ.ಸಿದ್ನಾಳ, ಮಲ್ಲಪ್ಪ ಮನಿಹಾಳ ಇತರರಿದ್ದರು.
Laxmi News 24×7