ಮಗು ಜನಿಸಿದ ಮೊದಲ 6 ತಿಂಗಳು ತಾಯಿಯ ಹಾಲೇ ಅತ್ಯುತ್ತಮ ಆಹಾರ. ಆದರೆ 6 ತಿಂಗಳ ನಂತರ ಮಗು ಬೆಳವಣಿಗೆಗೆ ಹೆಚ್ಚುವರಿ ಪೋಷಕಾಂಶಗಳ ಅಗತ್ಯವಿರುವುದರಿಂದ ಪೂರಕ ಆಹಾರ ಪ್ರಾರಂಭಿಸುವುದು ಅತ್ಯಂತ ಮುಖ್ಯ. ಅನ್ನಪ್ರಾಶನವು ಮಗುವಿಗೆ ಮೊದಲ ಬಾರಿ ಘನ/ಅರ್ಧ ಘನ ಆಹಾರವನ್ನು ಪರಿಚಯಿಸುವ ಪ್ರಕ್ರಿಯೆ. ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬಹಳ ಮುಖ್ಯ ಹಂತ. ಆದ್ದರಿಂದ ತಾಯಿಂದಿರು ಮಕ್ಕಳ ಆಹಾರದಲ್ಲಿ ಜಾಗೃತವಾಗಿರಬೇಕು. ವೈದ್ಯರ ಸಲಹೆಯಂತೆ ಪೂರಕ ಆಹಾರ ನೀಡಬೇಕೆಂದು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರಿಂದಿಲ್ಲಿ ಹೇಳಿದರು.
ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಚಿಕ್ಕಮಕ್ಕಳ ವಿಭಾಗ ಹಾಗೂ ನ್ಯಾಶನಲ್ ಐವಾಯ್ ಸಿ ಎಫ್ ಚಾಪ್ಟರ ಆಫ್ ಐಎಪಿ ಇವುಗಳ ಸಂಯುಕ್ತಾಶ್ರಯದಲ್ಲಿ ಅನ್ನಪ್ರಾಶನ ಪೋಶಕಾಂಶ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಹದ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್, ಐರನ್, ವಿಟಮಿನ್ಸ್ ಒದಗಿಸುತ್ತದೆ. ಮೆದುಳಿನ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ಮತ್ತು ಎತ್ತರ ಸಮತೋಲನದಲ್ಲಿ ಹೆಚ್ಚಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.
ನಂತರ ತಾಯಿಂದಿರೊಂದಿಗೆ ಸಮಲೋಚನೆ ನಡೆಸಿದ ಹಿರಿಯ ಚಿಕ್ಕ ಮಕ್ಕಳ ತಜ್ಞವೈದ್ಯರು ಹಾಗೂ ಕಾಹೆರನ ಹೊಸ ಯೋಜನೆಗಳ ನಿರ್ದೇಶಕರಾದ ಡಾ. ವಿ ಡಿ ಪಾಟೀಲ ಅವರು ಮಾತನಾಡಿ, 6 ತಿಂಗಳಿಂದ 1 ವರ್ಷದೊಳಗಿನ ಅವಧಿ ಮಗುವಿನ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಕಾಲ. ಸರಿಯಾದ ಸಮಯದಲ್ಲಿ ಪೂರಕ ಆಹಾರವನ್ನು ಪರಿಚಯಿಸುವುದು, ಪೋಷಕಾಂಶಯುಕ್ತ ಆಹಾರ ನೀಡುವುದು ಮತ್ತು ತಾಯಿಯ ಹಾಲನ್ನು ಮುಂದುವರಿಸುವುದು ಮಗುವಿನ ಆರೋಗ್ಯಕರ ಭವಿಷ್ಯಕ್ಕೆ ಪೂರಕವಾಗುತ್ತದೆ ಎಂದು ಹೇಳಿದರು.
ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ರೂಪಾ ಬೆಲ್ಲದ ಅವರು ಮಾತನಾಡಿ, ಮಗು ಕುತ್ತಿಗೆಯನ್ನು ನೇರವಾಗಿ ಹಿಡಿಯುವುದು, ಆಹಾರವನ್ನು ನುಂಗುವ ಸಾಮರ್ಥ್ಯ ಇರುವುದನ್ನು ಗಮನಿಸಬೇಕು. ಅಕ್ಕಿ, ರಾಗಿ ಗಂಜಿ, ಮೃದುವಾಗದ ಬಾಳೆಹಣ್ಣು, ಬೇಳೆ ನೀರು, ಸೊಪ್ಪು, ಮೃದು ಮಾಡಿದ ಗಜ್ಜರಿ, ಮೃದುವಾದ ಅನ್ನ, ಸಾಂಬಾರ, ಅಕ್ಕಿ, ಬೇಳೆ, ತರಕಾರಿ ಮಿಶ್ರಿತ ಖಿಚಡಿ, ಮೊಟ್ಟೆ, ಹಣ್ಣುಗಳು ಸೇರಿದಂತೆ ವಿವಿಧ ಮೃದು ಪೂರಕ ಆಹಾರವನ್ನು ನೀಡಬೇಕು. ಸ್ವಚ್ಚತೆ ಅತ್ಯಂತ ಮುಖ್ಯವಾಗಿದ್ದು, ಹೊಸ ಆಹಾರವನ್ನು ಒಂದೊಂದಾಗಿ ನೀಡಬೇಕು. ತಾಯಿ ಅಥವಾ ಪಾಲಕರು ಸಹನೆ ಹಾಗೂ ಪ್ರೀತಿಯಿಂದ ರೂಪಿಸಬೇಕು. ಮಗುವಿನೊಂದಿಗೆ ಕುಳಿತು ತಿನ್ನಿಸುವುದು, ನಗುತ್ತಾ ಮಾತನಾಡುವುದು, ಆಹಾರ ಸಮಯವನ್ನು ಸಂತೋಷಕರವಾಗಿಸುವುದು ಮುಖ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ. ನಿರಂಜನಾ ಮಹಾಂತಶೆಟ್ಟಿ, ಡಾ. ಸುಜಾತಾ ಜಾಲಿ, ಡಾ. ತನ್ಮಯಾ ಮೆಟಗುಡ್, ಡಾ. ಜ್ಞಾನೇಶ ಕಾಂಬಳೆ, ಡಾ. ವಿರೇಶ ಮಾನ್ವಿ, ಡಾ. ಶೈಲಾ ಪಾಚ್ಚಾಪೂರೆ, ಡಾ. ಸ್ಮೃತಿ ರೂಗಿ, ಡಾ. ಸೋನಾಲಿ ಬಿಜ್ಜರಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಸುಮಾರು 50ಕ್ಕೂ ಅಧಿಕ ಮಕ್ಕಳ ಆರೋಗ್ಯವನ್ನು ತಪಾಸಿಸಿ, ಮಗುವಿನ ಆಹಾರ ಕ್ರಮದ ಕುರಿತು ತಾಯಂದಿರಿಗೆ ಸೂಕ್ತ ಸಲಹೆ ನೀಡಲಾಯಿತು.
Laxmi News 24×7