ರಾಯಚೂರು(ಏ.17): ಮಹಾಮಾರಿ ಕೊರೋನಾ ರಾಜ್ಯ ಸೇರಿದಂತೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಮಧ್ಯೆ ರಾಜ್ಯದ ಹಲವು ಜಿಲ್ಲೆಗಳು ಸದ್ಯ ಕೊರೋನಾ ಸೋಂಕಿನಿಂದ ದೂರ ಇವೆ. ರಾಯಚೂರು ಜಿಲ್ಲೆಯೂ ಗ್ರೀನ್ ಝೋನ್ ನಲ್ಲಿದ್ದು ಸೋಂಕು ಹರಡದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.
ಈಗಾಗಲೇ ಮೊದಲು ಹಂತದ ಲಾಕ್ ಡೌನ್ ಮುಗಿದು ಎರಡನೆಯ ಹಂತದ ಲಾಕ್ ಡೌನ್ ಆರಂಭವಾಗಿದೆ. ಲಾಕ್ ಡೌನ್ ಮಾಡಿದ್ದರೂ ಜನ ಅನಗತ್ಯವಾಗಿ ಓಡಾಡುತ್ತಿದ್ದಾರೆ, ಬಹುತೇಕ ಜನರು ಆಸ್ಪತ್ರೆ, ಗ್ಯಾಸ್ ಖರೀದಿ, ಔಷಧಿ ಖರೀದಿ, ರೇಷನ್ ತರಲು ಹೋಗಿದ್ದೆ, ಅಗತ್ಯ ಸೇವೆಗಳ ಪೋರೈಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಬೈಕ್ ಸ್ಕೂಟಿ, ಕಾರ್ ಗಳಲ್ಲಿ ತಿರುಗಾಡುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಇಂದು ರಾಯಚೂರಿನಲ್ಲಿ ಎಎಸ್ಪಿ ಶ್ರೀಹರಿಬಾಬು ನೇತ್ರತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು. ಅಂಬೇಡ್ಕರ್ ವೃತ್ತದಲ್ಲಿ ಅನಗತ್ಯವಾಗಿ ತಿರುಗಾಡುವವರನ್ನು ತಡೆದು ಪರಿಶೀಲಿಸಿ ವಾಹನ, ಪಾಸ್ ಗಳನ್ನು ಸಹ ಸೀಜ್ ಮಾಡಿದರು.
ಜಿಲ್ಲೆಯಲ್ಲಿ ಮಾರ್ಚ 26 ರಿಂದ ವಾಹನಗಳಲ್ಲಿ ಅನಗತ್ಯವಾಗಿ ತಿರುಗಾಡುವವರ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಿನ್ನೆಯವರೆಗೂ 3810 ವಾಹನಗಳನ್ನು ಸೀಜ್ ಮಾಡಲಾಗಿದೆ. 688 ಜನರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೇ 3 ರವರೆಗೂ ವಾಹನಗಳನ್ನು ಮಾಲೀಕರಿಗೆ ವಾಪಸ್ಸು ನೀಡುವುದಿಲ್ಲ. ಬರುವ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಕಡೆ ಜಿಲ್ಲೆಯ ಎಲ್ಲಾ ನಗರ ಹಾಗು ಪಟ್ಟಣ ಪ್ರದೇಶದಲ್ಲಿ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಸಂಚರಿಸುವುದನ್ನು ಸಹ ನಿರ್ಬಂಧಿಸಲಾಗಿದೆ.
ಈಗ ರಾಯಚೂರು, ಸಿಂಧನೂರು, ಲಿಂಗಸಗೂರು, ಮಾನವಿ, ಮಸ್ಕಿ, ದೇವದುರ್ಗಾ, ಸಿರವಾರ ಸೇರಿದಂತೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಒಟ್ಟು 400 ಕಡೆ ಬ್ಯಾರಿಕೇಡ್ ಹಾಕಿ ಬಡಾವಣೆಯಿಂದ ಬಡಾವಣೆಗೆ ಸಂಚರಿಸಿದಂತೆ ಲಾಕ್ ಮಾಡಲಾಗಿದೆ.
ಕೊರೋನಾ ತಡೆಗೆ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿ ಬಿ ವೇದಮೂರ್ತಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಕ್ರಮ ಕೈಗೊಂಡು ಜನರನ್ನು ಕೊರೋನಾದಿಂದ ದೂರವಿಡಲು ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ಸಹ ಸಹಕರಿಸಬೇಕಾಗಿದೆ.