ರಾಯಚೂರು : ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಜನಾಶೀರ್ವಾದ ಸಮಾರಂಭವನ್ನು ನಡೆಸುತ್ತಿದ್ದು , ಇದಕ್ಕೂ ಪೂರ್ವದಲ್ಲಿ ಸಾರ್ವಜನಿಕರಿಗೆ ಏನನ್ನು ನೀಡಿ ಆಶೀರ್ವಾದ ಪಡೆಯಲು ಮುಂದಾಗಿರುವುದರ ಬಗ್ಗೆ ಬಿಜೆಪಿಗರು ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ . ಕೆ . ಶಿವಕುಮಾರ ಲೇವಡಿ ಮಾಡಿದ್ದಾರೆ . ಸ್ಥಳೀಯ ಖಾಸಗಿ ಹೋಟೆಲ್ ನಲ್ಲಿ ವಿಭಾಗೀಯ ಮಟ್ಟದ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ , ಬಿಜೆಪಿ ಸರ್ಕಾರ ಬಂದ ಮೇಲೆ ಸಾರ್ವಜನಿಕರ ಬದುಕು ದುಸ್ತರಗೊಂಡಿದೆ .
ಕೊರೋನಾ ಸಮಯದಲ್ಲಿ ಜನರಿಗೆ ಔಷಧಿ , ಆಸ್ಪತ್ರೆಗಳಿಗೆ ಬೆಡ್ , ಆಯಂಬುಲೆನ್ಸ್ ನೀಡಿದ್ದಕ್ಕೆ ಆಶೀರ್ವಾದ ಕೇಳುತ್ತಾರೆಯೇ ? ಬಿಎಸ್ ವೈರನ್ನು ಯಾಕೆ ತೆಗೆದರು , ಕೇಂದ್ರ ಆರೋಗ್ಯ ಸಚಿವರನ್ನು ಯಾಕೆ ಬದಲಾವಣೆ ಮಾಡಿದರು , ಅಚ್ಚೇದಿನ್ ಯಾರಿಗೆ ಎಲ್ಲಿ ಬಂದಿದೆ ಇದನ್ನು ಬಿಜೆಪಿಗರು ಹೇಳಬೇಕು . ಅಸಂಘಟಿತರಿಗೆ ಘೋಷಿಸಿದ ಪ್ಯಾಕೇಜ್ ಏನಾಯಿತು ಎಂಬುದನ್ನು ತಿಳಿಸಬೇಕು , ಕೋವಿಡ್ ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿರುವುದರ ಬಗ್ಗೆ ಬಿಜೆಪಿಗರೇ ಬಿಡಿಸಿ ಹೇಳಬೇಕು . ಕೇಂದ್ರ ಸಚಿವರಾಗಿದ್ದೇವೆ ಎಂದು ಆಶೀರ್ವಾದ ಯಾತ್ರೆ ನಡೆಸುತ್ತಿದ್ದು ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು .