ಹಾವೇರಿ: ನಗರದ ಹೊರವಲಯದಲ್ಲಿರುವ ಸರ್ಕಾರಿ ಮಹಿಳಾ ಹಾಸ್ಟೆಲ್ಗಳಲ್ಲಿ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ಕಿಡಿಗೇಡಿಯೊಬ್ಬನ ಉಪಟಳದಿಂದ ಬೇಸತ್ತ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಬಳಿ ಇರುವ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯ ಮತ್ತು ನಗರದ ಹೊರಭಾಗದಲ್ಲಿರುವ ವೃತ್ತಿಪರ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಈ ಸಮಸ್ಯೆ ಕಂಡುಬಂದಿದೆ.
ಜನಸಂಚಾರ ವಿರಳವಾಗಿರುವ ಈ ಹಾಸ್ಟೆಲ್ಗಳ ಆವರಣದ ಬಳಿ ಬರುವ ವ್ಯಕ್ತಿಯೊಬ್ಬ, ವಿದ್ಯಾರ್ಥಿನಿಯರ ಎದುರು ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ವಿದ್ಯಾರ್ಥಿನಿಯರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಹಾಸ್ಟೆಲ್ನಲ್ಲಿ ಕನಿಷ್ಠ ಭದ್ರತಾ ವ್ಯವಸ್ಥೆಯೂ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಇಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ರಾತ್ರಿ ಪಾಳಿಯಲ್ಲಿ ಕಾವಲು ಕಾಯಲು ವಾಚ್ಮನ್ ನೇಮಕವಾಗಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ
ಇದರ ಜೊತೆಗೆ ಹಾಸ್ಟೆಲ್ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಕೊಠಡಿಗಳಲ್ಲಿ ಮಲಗಲು ಸಮರ್ಪಕವಾದ ಬೆಡ್ ವ್ಯವಸ್ಥೆಯಿಲ್ಲ ಹಾಗೂ ವಿದ್ಯುತ್ ಕಡಿತಗೊಂಡಾಗ ಪರ್ಯಾಯ ವ್ಯವಸ್ಥೆ ಇಲ್ಲದೆ ಕತ್ತಲಲ್ಲಿ ಇರಬೇಕಾದ ಪರಿಸ್ಥಿತಿ ಇದೆ.
ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಹಾಸ್ಟೆಲ್ ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು, ತಕ್ಷಣವೇ ಸೂಕ್ತ ಭದ್ರತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
Laxmi News 24×7