ರಾಯಚೂರು: ಕೃಷಿ ವಿಜ್ಞಾನಗಳ ವಿವಿ ನೇಮಕಾತಿಯ ಮತ್ತೊಂದು ಯಡವಟ್ಟು ಬಟಾಬಯಲಾಗಿದೆ. ಓರ್ವ ಅಭ್ಯರ್ಥಿಯ ಉದ್ಯೋಗ ನೇಮಕಾತಿ ಆದೇಶವನ್ನ ಈಗ ರದ್ದು ಮಾಡಿ ನೇಮಕಾತಿಯಲ್ಲಿ ತಪ್ಪೆಸಗಿರುವುದನ್ನ ವಿವಿ ಒಪ್ಪಿಕೊಂಡಿದೆ. ವಿವಿ ನೇಮಕಾತಿ ಬಣ್ಣಬಯಲು ಮಾಡಿದ್ದ `ಪಬ್ಲಿಕ್ ಟಿವಿ’ ಈಗ ವಿವಿಯ ಮತ್ತೊಂದು ಯಡವಟ್ಟನ್ನ ಬಯಲು ಮಾಡಿದೆ. ಇನ್ನೂ 75 ಹುದ್ದೆಗಳ ನೇಮಕಾತಿಯನ್ನ ಎಸ್ಐಟಿ ತನಿಖೆಗೆ ಒಪ್ಪಿಸಲು ಆಗ್ರಹ ಕೇಳಿಬರುತ್ತಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ 75 ಸಹಾಯಕ ಪ್ರಾಧ್ಯಾಪಕರ ಹುದ್ದೆ ಮತ್ತು ಇತರ ಹುದ್ದೆಗಳು ಹಾಗೂ ವರ್ಗಾವಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಹುದ್ದೆಗಳ ನೇಮಕಾತಿ ನಿಯಮಗಳನ್ನೇ ಗಾಳಿಗೆ ತೂರಿರುವ ಗಂಭೀರ ಆರೋಪ ಹೊತ್ತಿದೆ. ಈಗ ಕೃಷಿ ವಿವಿಯ ಹಿಂದಿನ ಕುಲಪತಿ ಹಾಗೂ ರಿಜಿಸ್ಟ್ರಾರ್ ಮತ್ತೊಂದು ಯಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿದ್ದ ಎಫ್ಎಂಪಿಇ ವಿಭಾಗದ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲೂ ಯಡವಟ್ಟು ನಡೆದಿದೆ.
ಹುದ್ದೆ ನೇಮಕಾತಿ ಅಧಿಸೂಚನೆಯನ್ನ ಬಹಿರಂಗಪಡಿಸದೆ, ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲೇ ಕೇವಲ ಓರ್ವ ಅಭ್ಯರ್ಥಿಗೆ ಸಂದರ್ಶನ ನಡೆಸಿ ವಿವಿ ಆಯ್ಕೆ ಮಾಡಿಕೊಂಡಿತ್ತು. ಮಾಹಿತಿ ತಿಳಿದ ಉಳಿದ ಅಭ್ಯರ್ಥಿಗಳು ಜಿಲ್ಲಾಧಿಕಾರಿಗೆ, ಕುಲಸಚಿವರಿಗೆ ದೂರು ನೀಡಿದ್ದರು. ಹೀಗಾಗಿ ಈಗಾಗಲೇ ಆಯ್ಕೆ ಮಾಡಿ, ನೇಮಕ ಮಾಡಿಕೊಂಡಿದ್ದ ಅಭ್ಯರ್ಥಿಯ ಆದೇಶವನ್ನ ರದ್ದು ಮಾಡಿ, ತನ್ನ ತಪ್ಪು ಮುಚ್ಚಿಕೊಳ್ಳಲು ವಿವಿ ಮುಂದಾಗಿದೆ.
ಇನ್ನೂ 75 ಹುದ್ದೆಗಳ ನೇಮಕಾತಿ ಕುರಿತು ಜಿಲ್ಲಾಧಿಕಾರಿ ಪೂವಿತಾ ಎಸ್ ರಚಿಸಿದ್ದ ತನಿಖಾ ತಂಡ ವರದಿಯನ್ನ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ. ತನಿಖಾ ತಂಡಕ್ಕೆ ವಿವಿ ಅಧಿಕಾರಿಗಳು ಅಪೂರ್ಣ ಮಾಹಿತಿಯನ್ನು ನೀಡಿದ್ದು, ಅನುಮಾನ ಹೆಚ್ಚಿಸಿದೆ. ಜಿಲ್ಲಾಧಿಕಾರಿ ವರದಿಯನ್ನು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ರವಾನಿಸಿದ್ದಾರೆ. ವಿವಿ ವ್ಯವಸ್ಥಾಪನ ಮಂಡಳಿ ಅನುಮೋದನೆ ಪಡೆಯದೇ ನೇಮಕಾತಿ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸರ್ಕಾರದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಕೃಷಿ ವಿವಿ ನೇಮಕಾತಿ ಬಗ್ಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಉನ್ನತ ತನಿಖೆಗೆ ಆಗ್ರಹಿಸುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯದರ್ಶಿ ಎ.ವಸಂತ ಕುಮಾರ್ ರಾಜ್ಯ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿಗೆ ಕೃಷಿ ವಿವಿ ನೇಮಕಾತಿ ಪ್ರಕರಣವನ್ನ ಎಸ್ಐಟಿ ತನಿಖೆಗೆ ಒಳಪಡಿಸುವಂತೆ ಲಿಖಿತ ದೂರು ನೀಡಿದ್ದಾರೆ. ಇನ್ನೂ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕೃಷಿ ವಿವಿಯಲ್ಲಿ ಮಹಾ ಭ್ರಷ್ಟಾಚಾರವಾಗಿದೆ. ಇದು ಮುಖ್ಯಮಂತ್ರಿಗಳಿಗೆ ಕಾಣುವುದಿಲ್ಲವಾ? ಕೃಷಿ ಇಲಾಖೆ ಸಚಿವರಿಗೆ ಕಾಣುವುದಿಲ್ಲವಾ? ಕಣ್ಣು ಬಿಟ್ಟು ನೋಡಿ, ಉನ್ನತ ತನಿಖೆ ನಡೆಸಿ ಅಂತ ಶಾಸಕ ಶಿವರಾಜ್ ಪಾಟೀಲ್ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿವಿಯ 75 ಸಹಾಯಕ ಪ್ರಾಧ್ಯಾಪಕರ ಹುದ್ದೆ ಹಾಗೂ ಒಂದು ತಾತ್ಕಾಲಿಕ ಗುತ್ತಿಗೆ ಆಧಾರದ ಹುದ್ದೆ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮತ್ತೊಂದು ಕೆಪಿಎಸ್ಸಿ ಹಗರಣ ರಾಯಚೂರಿನಲ್ಲಿ ನಡೆದಿರುವ ಅನುಮಾನ ದಟ್ಟವಾಗಿದೆ. ಈಗ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Laxmi News 24×7