ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮೈಲುಗಲ್ಲಾಗಲಿರುವ `ನಮ್ಮ ಮೆಟ್ರೋ’ ಪಿಂಕ್ ಲೈನ್ನ 7.5 ಕಿ.ಮೀ ಮಾರ್ಗವು ಇದೇ ನ.13ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿದ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ಬೆಂಗಳೂರು ಮೆಟ್ರೋ ಜಾಲವು 100 ಕಿ.ಮೀ ಮೈಲಿಗಲು ತಲುಪಲಿದೆ.
ಕಾಳೇನ ಅಗ್ರಹಾರದಿಂದ-ತಾವರೆಕೆರೆ (ಸುದ್ದುಗುಂಟೆಪಾಳ್ಯ) ನಿಲ್ದಾಣದವರೆಗಿನ ಈ ಹೊಸ ಮಾರ್ಗವು ನ.14ರ ಬೆಳಿಗ್ಗೆ 6.00 ಗಂಟೆಯಿಂದ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನ.13 ರಂದು ಮಧ್ಯಾಹ್ನ 12:30ಕ್ಕೆ ಡೈರಿ ಸರ್ಕಲ್ ಬಳಿಯ ಅಗ್ನಿಶಾಮಕ ದಳದ ಆವರಣಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಲ್ಲೇ ಸಮೀಪವಿರುವ ತಾವರೆಕೆರೆ ಸುದ್ದುಗುಂಟೆಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಈ ಹೊಸ 7.5 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಘಾಟನೆಯ ನಂತರ ಪ್ರಧಾನಿಗಳು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಅದೇ ಮೆಟ್ರೋ ರೈಲಿನ ಮೂಲಕ ತಾವರೆಕೆರೆ ನಿಲ್ದಾಣದಿಂದ ಐಐಎಂಬಿ ನಿಲ್ದಾಣದವರೆಗೆ ಪ್ರಯಾಣಿಸಲಿದ್ದಾರೆ. ತದನಂತರ ಐಐಎಂಬಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿರುವ ಬೃಹತ್ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಸುಗಮ ನಿರ್ವಹಣೆಗೆ ಪೊಲೀಸ್ ಇಲಾಖೆ, ಬಿಎಂಆರ್ಸಿಎಲ್, ಜಿಬಿಎ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸೂಕ್ತ ಸಮನ್ವಯತೆ ಕಾಯ್ದುಕೊಳ್ಳಲು ಇಂದು ಸಭೆ ನಡೆಸಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ನಗರದ ವಾಹನ ದಟ್ಟಣೆಗೆ ಮುಕ್ತಿ ಮತ್ತು ಸುಲಭ ಸಂಪರ್ಕ:
ಪಿಂಕ್ ಲೈನ್ನ ಈ ಆರಂಭಿಕ ಭಾಗವು ಬನ್ನೇರುಘಟ್ಟ ರಸ್ತೆಯ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ವಿಶೇಷವಾಗಿ, ಜಯದೇವ ಮೆಟ್ರೋ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಸಿಟಿ ಮಾರ್ಗಗಳಿಗೆ ಇಂಟಚೇಂಜ್ ಸೌಲಭ್ಯವಿರುವುದರಿಂದ, ಈ ಭಾಗದ ನಾಗರಿಕರು ಸಿಲ್ಕ್ ಬೋರ್ಡ್, ಹೆಚ್ಎಸ್ಆರ್ ಲೇಔಟ್, ಜಯನಗರ, ಮಜೆಸ್ಟಿಕ್ ಹಾಗೂ ವೈಟ್ಫೀಲ್ಡ್ ಸೇರಿದಂತೆ ನಗರದ ಯಾವುದೇ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಬಹುದು.
ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ 5 ಮೀಸಲು ರೈಲುಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಯ ಸ್ಥಿರತೆಯನ್ನು ಗಮನಿಸಿ, ಈ ಕಾಲಾವಧಿಯನ್ನು ಮತ್ತಷ್ಟು ಕಡಿಮೆ ಮಾಡುವ ಯೋಜನೆಯಿದೆ. ಈ 7.5 ಕಿ.ಮೀ ಮಾರ್ಗ ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಮೆಟ್ರೋ ಜಾಲವು 103 ಕಿ.ಮೀ. ತಲುಪಲಿದ್ದು, ನಗರವು 100 ಕಿ.ಮೀ. ಗಡಿ ದಾಟಿದ ಐತಿಹಾಸಿಕ ಸಾಧನೆಗೆ ಪಾತ್ರವಾಗಿದೆ. ಅಲ್ಲದೆ, ಭವಿಷ್ಯದಲ್ಲಿ 400 ರಿಂದ 500 ಕಿಮೀ ಮೆಟ್ರೋ ಜಾಲ ಹೊಂದಬೇಕೆಂಬ ದೂರದೃಷ್ಟಿಗೂ ಇದೊಂದು ಮೈಲುಗಲ್ಲು ಎಂದರು.
ಮುಂದಿನ ಒಂದೂವರೆ ವರ್ಷದಲ್ಲಿ 170 ಕಿ.ಮೀ. ಮೆಟ್ರೋ ಜಾಲದ ಬೃಹತ್ ಯೋಜನೆಗಳು:
ನಗರದಲ್ಲಿ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಮೆಟ್ರೋ ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಸ್ಪಷ್ಟ ಗುರಿಯನ್ನು ಸರ್ಕಾರ ಹೊಂದಿದೆ.
ಪಿಂಕ್ ಲೈನ್ ಪೂರ್ಣ ಪ್ರಮಾಣ: ತಾವರೆಕೆರೆಯಿಂದ ನಾಗವಾರದವರೆಗಿನ 13.7 ಕಿ.ಮೀ. ಭೂಗತ ಮಾರ್ಗ ಪೂರ್ಣಗೊಂಡಾಗ ಪಿಂಕ್ ಲೈನ್ ಒಟ್ಟು 21.2 ಕಿ.ಮೀ. ತಲುಪಲಿದೆ.
ಬ್ಲೂ ಲೈನ್ ಸಂಪರ್ಕ: ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂವರೆಗಿನ 19.75 ಕಿ.ಮೀ ಮತ್ತು ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮಾರ್ಗಗಳನ್ನು ಮುಂದಿನ ವರ್ಷವೇ ಮುಕ್ತಗೊಳಿಸುವ ಗುರಿ ಇದೆ. ಕೆ.ಆರ್.ಪುರಂನಿಂದ ಹೆಬ್ಬಾಳ ನಡುವಿನ ಸವಾಲಿನ ಮಾರ್ಗವನ್ನೂ ಪೂರ್ಣಗೊಳಿಸಿ, ಸಿಲ್ಕ್ ಬೋರ್ಡ್ನಿಂದ ಏರ್ಪೋರ್ಟ್ವರೆಗಿನ ಒಟ್ಟು 59 ಕಿ.ಮೀ ಸಂಪರ್ಕವನ್ನು ಶೀಘ್ರವೇ ಕಲ್ಪಿಸಲಾಗುವುದು.
ಆರೆಂಜ್ ಲೈನ್: ಜೆ.ಪಿ. ನಗರ 4ನೇ ಹಂತದಿಂದ ಮೈಸೂರು ರಸ್ತೆ, ಮಾಗಡಿ ರಸ್ತೆ ದಾಟಿ ಹೆಬ್ಬಾಳಕ್ಕೆ ತಲುಪುವ 32 ಕಿ.ಮೀ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.5 ಕಿ.ಮೀ (ಒಟ್ಟು 44.5 ಕಿ.ಮೀ) ಆರೆಂಜ್ ಲೈನ್ಗೆ ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಭೂಮಿಪೂಜೆ ನೆರವೇರಿಸಲಾಗುವುದು.
ರೆಡ್ ಲೈನ್: ಸರ್ಜಾಪುರದಿಂದ ಹೆಬ್ಬಾಳದವರೆಗೆ 37.8 ಕಿ.ಮೀ. ಉದ್ದದ ರೆಡ್ ಲೈನ್ ಯೋಜನೆಗೆ 2025ರ ಜನವರಿಯಲ್ಲಿಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರೆತ ತಕ್ಷಣ ಟೆಂಡರ್ ಕರೆಯಲಾಗುವುದು.
ಸರ್ಜಾಪುರ ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಒಂದೇ ಪರಿಹಾರ:
ಸರ್ಜಾಪುರ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಹೆಸರು. ಮೆಟ್ರೋ ಒಂದೇ ಇದಕ್ಕೆ ಪರಿಹಾರ. ಹೀಗಾಗಿ ಇಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಮಾಡಿ ಎಂಬ ಬೇಡಿಕೆ ಇದೆ. ಸರ್ಜಾಪುರದಿಂದ ಆರಂಭಿಸಿ, ಇಬ್ಲೂರ್ ಜಂಕ್ಷನ್ ಔಟರ್ ರಿಂಗ್ ರೋಡ್ ಬಳಿ ಕ್ರಾಸ್ ಆಗಿ ಸೆಂಟ್ ಜಾನ್ಸ್ವರೆಗೆ ಬಂದು ಸೆಂಟ್ ಜಾನ್ಸ್ನಿಂದ ಹೆಬ್ಬಾಳದವರೆಗೆ ರೆಡ್ ಲೈನ್ 37.8 ಕಿಮೀ ಅನುಮತಿಗಾಗಿ 2025 ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ ಕೇಂದ್ರದಿಂದ ಒಪ್ಪಿಗೆ ಬಂದಿಲ್ಲ. ಬೆಂಗಳೂರು ಸಾರ್ವಜನಿಕ ಸಾರಿಗೆ ಅವಶ್ಯಕತೆ ದೃಷ್ಠಿಯಿಂದ ಸರ್ಜಾಪುರ ಮೆಟ್ರೋ ಬಹು ಮುಖ್ಯ ಯೋಜನೆ ಆಗಿರುವುದರಿಂದ ಈ ಯೋಜನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಾರಂಭಕ್ಕೆ ತರುವ ಯೋಜನೆ ಹಾಕಿದ್ದೇವೆ. ಸಮಾರಂಭದ ವೇಳೆ ಈ ಬಗ್ಗೆ ಪ್ರಧಾನಿಗೆ ಮನವಿ ಸಲ್ಲಿಸಲಿದ್ದು, ಒಪ್ಪಿಗೆ ದೊರೆತರೇ ಮುಂದಿನ ವರ್ಷದ ಅಂತ್ಯದೊಳಗೆ ಅದನ್ನೂ ಟೆಂಡರ್ ಕರೆದು ಕಾರ್ಯಾರಂಭ ಮಾಡುವ ಗುರಿ ಇದೆ ಎಂದು ಮಾಹಿತಿ ನೀಡಿದರು.
ಕೇಂದ್ರದ ಪಾಲು ಹೆಚ್ಚಳಕ್ಕೆ ಪ್ರಧಾನಿಗೆ ಮನವಿ:
ಬೆಂಗಳೂರು ಮೆಟ್ರೋ ಯೋಜನೆಯ ಒಟ್ಟು ವೆಚ್ಚ ಹಂಚಿಕೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಇರುವ ಭಾರಿ ವ್ಯತ್ಯಾಸವನ್ನು ಸಚಿವ ಕೃಷ್ಣ ಬೈರೇಗೌಡ ಅವರು ಅಂಕಿ-ಅಂಶಗಳ ಸಮೇತ ವಿವರಿಸಿದರು. ಮೆಟ್ರೋ-1ನೇ ಹಂತದಿಂದ 3ನೇ ಹಂತದವರೆಗಿನ ಒಟ್ಟು 77,891 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಸರ್ಕಾರವೇ 65,291 ಕೋಟಿ ರೂ. (ಶೇ. 84) ಭರಿಸುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ 12,600 ಕೋಟಿ ರೂ. (ಶೇ. 16) ಆಗಿದೆ. ಮೆಟ್ರೋ ಮೊದಲ ಹಂತದಲ್ಲಿ ಶೇ.80ರಷ್ಟಿದ್ದ ಕೇಂದ್ರದ ಬಂಡವಾಳ ಹೂಡಿಕೆ, ಎರಡನೇ ಹಂತದಲ್ಲಿ ಕ್ರಮೇಣ ಶೇ.16ಕ್ಕೆ ಮತ್ತು ಪ್ರಸ್ತುತ ಶೇ.14ಕ್ಕೆ ಕುಸಿದಿದೆ ಎಂದು ತಿಳಿಸಿದರು.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ CRPF ಶಿಬಿರದ ಮೇಲೆ ಉಗ್ರರಿಂದ ಗುಂಡಿನ ದಾಳಿ; ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ
ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪಡೆಯುವ ಸಾಲವನ್ನು ಕೇಂದ್ರದ ಮೂಲಕ ಪಡೆಯಲಾಗುತ್ತಿದ್ದರೂ, ರೂಪಾಯಿ ಮೌಲ್ಯ ಕುಸಿತದ ಹೆಚ್ಚುವರಿ ಹೊರೆ ಹಾಗೂ ಸಾಲದ ಪ್ರತಿಯೊಂದು ಪೈಸೆಯನ್ನು ರಾಜ್ಯ ಸರ್ಕಾರವೇ ಮರುಪಾವತಿಸುತ್ತಿದೆ. ಜೊತೆಗೆ ಭೂಸ್ವಾಧೀನದ ಶೇ.100ರಷ್ಟು ವೆಚ್ಚ ಹಾಗೂ ಯೋಜನೆಯ ಅನುಮೋದನೆ ವಿಳಂಬದಿಂದ ಹೆಚ್ಚಾಗುವ ನಿರ್ಮಾಣ ವೆಚ್ಚವನ್ನು ರಾಜ್ಯವೇ ಭರಿಸಬೇಕಾಗಿದೆ. ಮೆಟ್ರೋದ 1046 ಕೋಟಿ ರೂ. ನಷ್ಟವನ್ನು ಈಗಾಗಲೇ ರಾಜ್ಯವೇ ಸರಿದೂಗಿಸಿದೆ. ಇನ್ನೂ 52 ಕೋಟಿ ರೂ. ನಷ್ಟ ಸಾಲ ಭರಿಸಿಕೊಡುವುದು ಬಾಕಿ ಇದ್ದು, ಮೆಟ್ರೋ ಆಡಳಿತ ಕೇಳಿದ ಕೂಡಲೇ ರಾಜ್ಯ ಸರ್ಕಾರ ಅದನ್ನೂ ಭರಿಸಲಿದೆ. ಈ ಎಲ್ಲಾ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೆಟ್ರೋ ಹೂಡಿಕೆಯಲ್ಲಿ ಸಮಪಾಲು (50-50) ಎಂದರೂ ಸಹ ವಾಸ್ತವವಾಗಿ ಶೇ.84ರಷ್ಟು ರಾಜ್ಯ ಸರ್ಕಾರ ಭರಿಸುತ್ತಿದೆ. ಶೇ.16ರಷ್ಟು ಮಾತ್ರ ಕೇಂದ್ರ ಸರ್ಕಾರ ಭರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರವು ದೇಶದಲ್ಲೇ 2ನೇ ಅತಿ ಹೆಚ್ಚು ಜಿಎಸ್ಟಿ ತಂದುಕೊಡುವ ಮತ್ತು ಭಾರಿ ಪ್ರಮಾಣದ ವಿದೇಶಿ ವಿನಿಮಯ ಈಡೇರಿಸುವ ಕೇಂದ್ರವಾಗಿದೆ. ಹೀಗಾಗಿ ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಬೆಂಗಳೂರಿನ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ ತನ್ನ ಹೂಡಿಕೆಯ ಪಾಲನ್ನು ಹೆಚ್ಚಿಸಬೇಕು ಎಂದು ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿಯವರಿಗೆ ಖುದ್ದಾಗಿ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದರು.
Laxmi News 24×7