Breaking News

ರಾತ್ರೋರಾತ್ರಿ ಪುತ್ಥಳಿ ಪ್ರತಿಷ್ಠಾಪನೆ: ವಾಲ್ಮೀಕಿ ಭವನ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

Spread the love

ಬೆಳಗಾವಿ: ಖಾನಾಪುರ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಪಕ್ಕದ ಸರ್ಕಾರಿ ನಿವೇಶನದಲ್ಲಿ ಸೋಮವಾರ ತಡರಾತ್ರಿ ಮಹರ್ಷಿ ವಾಲ್ಮೀಕಿಯವರ 7 ಅಡಿ ಎತ್ತರದ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ.

ಈ ಬೆಳವಣಿಗೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ನಿವೇಶನದಲ್ಲಿ ವಾಲ್ಮೀಕಿ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿ ವಾಲ್ಮೀಕಿ ಸಮುದಾಯದವರು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ್ದಾರೆ.

ಸೋಮವಾರ ಸಂಜೆ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ವಾಲ್ಮೀಕಿ ಜಯಂತಿ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆ ತಡರಾತ್ರಿಯವರೆಗೂ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿ ನಿರತರಾಗಿದ್ದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಕೆಲ ಮುಖಂಡರು ಮತ್ತು ಕಾರ್ಯಕರ್ತರು ತೆರೆದ ಟ್ರ್ಯಾಕ್ಟರ್‌ನಲ್ಲಿ ಪುತ್ಥಳಿಯನ್ನು ತಂದು ಬಸವೇಶ್ವರ ವೃತ್ತದ ಬಳಿಯ ಸರ್ಕಾರಿ ನಿವೇಶನದಲ್ಲಿ ಇರಿಸಿದ್ದಾರೆ.

ಬಳಿಕ ಇಟ್ಟಿಗೆ, ಸಿಮೆಂಟ್, ಮರಳು ಹಾಗೂ ಖಡಿ ಬಳಸಿ ಪುತ್ಥಳಿ ಪ್ರತಿಷ್ಠಾಪನೆಗೆ ಕಟ್ಟೆ ನಿರ್ಮಿಸಲಾಗಿದೆ. ಮಧ್ಯರಾತ್ರಿ ಸುಮಾರು 1.30ರವರೆಗೆ ಮೆರವಣಿಗೆ ನಡೆದಿದ್ದು, ಕಾರ್ಯಕ್ರಮ ಮುಗಿದ ಬಳಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಸ್ಥಳಕ್ಕೆ ತೆರಳಿ ಶ್ರಮದಾನದ ಮೂಲಕ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನಲಾಗಿದೆ.

ರಾತ್ರಿಯಿಡೀ ಈ ಪ್ರಕ್ರಿಯೆ ನಡೆದಿದ್ದರೂ ಪೊಲೀಸರಿಗೆ ಮಾಹಿತಿ ತಿಳಿಯದಿರುವ ಬಗ್ಗೆ ಕೆಲ ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲಿರುವ ಸರ್ಕಾರಿ ನಿವೇಶನದಲ್ಲಿ ಅನುಮತಿ ಹಾಗೂ ಸ್ಥಳದ ಹಕ್ಕಿನ ಕುರಿತು ಸ್ಪಷ್ಟತೆ ಇಲ್ಲದೆ ಪುತ್ಥಳಿ ಪ್ರತಿಷ್ಠಾಪನೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.

ವಾಲ್ಮೀಕಿ ಭವನ ನಿರ್ಮಾಣಕ್ಕೆ ಪಟ್ಟು

ಮಂಗಳವಾರ ಬೆಳಗ್ಗೆಯಿಂದಲೇ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ವಾಲ್ಮೀಕಿ ಸಮುದಾಯದ ಮಹಿಳೆಯರು, ಯುವಕರು ಹಾಗೂ ನಾಗರಿಕರು ಪುತ್ಥಳಿಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಬಳಿಕ ಈ ನಿವೇಶನದಲ್ಲಿ ವಾಲ್ಮೀಕಿ ಭವನ ನಿರ್ಮಿಸಬೇಕು ಮತ್ತು ನಿವೇಶನವನ್ನು ಭವನ ನಿರ್ಮಾಣಕ್ಕಾಗಿ ಹಸ್ತಾಂತರಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನಾಕಾರರು ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಸೇವಿಸುವ ಮೂಲಕ ತಮ್ಮ ಹೋರಾಟವನ್ನು ಮುಂದುವರಿಸಿದರು. ರಾತ್ರಿ ವೇಳೆಯೂ ಪ್ರತಿಭಟನೆ ಮುಂದುವರಿದಿದ್ದು, ಸ್ಥಳೀಯ ಪೊಲೀಸರು, ತಹಸೀಲ್ದಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಮ್ಮ ಅಹವಾಲು ಆಲಿಸದಿರುವುದು ಪ್ರತಿಭಟನಾಕಾರರ ಅಸಮಾಧಾನಕ್ಕೆ ಕಾರಣವಾಯಿತು.

ಈ ಕುರಿತು ಶಾಸಕ ವಿಠ್ಠಲ ಹಲಗೇಕರ ಅವರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವುದಾಗಿ ಅವರು ತಿಳಿಸಿದ್ದಾರೆ. ಅಲ್ಲಿಯವರೆಗೆ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಮಲ್ಲೇಶಿ ಪೋಳ, ಹಣಮಂತ ಗುಡ್ಲಾರ, ಮಹೇಶ ಶೀಗಿಹಳ್ಳಿ, ಬಸವಣ್ಣಿ ಕೋಟೂರ, ರಾಜು ನಾಯಿಕ, ಮಲ್ಲೇಶಿ ನಾಯಿಕ, ಪಾಂಡುರಂಗ ಗೂಳಣ್ಣವರ ಸೇರಿದಂತೆ ಸಮುದಾಯದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಪ್ರಿಯತಮೆ ದೂರವಾದ್ಲು ಅಂತಾ ರೊಚ್ಚಿಗೆದ್ದ ಪಾಗಲ್ ಪ್ರೇಮಿ – ಲವರ್ ಬಾವನ ಬೈಕ್‌ಗೆ ಬೆಂಕಿ ಹಚ್ಚಿ ವಿಕೃತಿ!

Spread the loveಬೆಂಗಳೂರು: ಸೋಷಿಯಲ್ ಮಿಡೀಯಾದಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ ಆ ಪ್ರೀತಿಗೆ ಹೆಚ್ಚು ದಿನ ಬಾಳಲಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ