ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದದ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪದ ಬಾಂಬ್ ಸಿಡಿಸಿದ್ದಾರೆ. ದೇವೇಗೌಡರ ಕುಟುಂಬದ ರಾಜಕೀಯ ಅಸ್ತಿತ್ವವನ್ನೇ ಮುಗಿಸಲು ಬರೋಬ್ಬರಿ 600 ಕೋಟಿ ರೂ. ಬೃಹತ್ ಡೀಲ್ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಹೆಚ್‌ಡಿಕೆ, “ಒಂದು ಕುಟುಂಬವನ್ನು ಮುಗಿಸಲು 600 ಕೋಟಿ ರೂ. ಡೀಲ್ ನಡೆದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಹಿರಿಯ ನಾಯಕ ಬೇರೆ ಯಾರೂ ಅಲ್ಲ, ನಮ್ಮ ರಾಜ್ಯದ ಈಗಿನ ‘ಮಹಾನ್ ಮುಖ್ಯಮಂತ್ರಿ’. ದೇವೇಗೌಡರ ಕುಟುಂಬವನ್ನು ಮುಗಿಸಿ ಎಂದು ಹೇಳಿರುವುದು ಸತ್ಯ” ಎಂದಿದ್ದಾರೆ.
“ಇವರ ಪಾಪದ ಕೊಡ ತುಂಬಿದೆ, ಸತ್ಯ ಹೊರಬರಲೇಬೇಕು. ಭಗವಂತನೇ ಎಲ್ಲವನ್ನೂ ಹೊರಗೆ ತರುತ್ತಿದ್ದಾನೆ. ಪೊಲೀಸ್ ಅಧಿಕಾರಿಗಳ ಮೂಲಕ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದು, ಇದರ ಬಗ್ಗೆ ಉನ್ನತ ಮಟ್ಟದ ಪ್ರಾಮಾಣಿಕ ತನಿಖೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಅನಗತ್ಯವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಕಿಡಿಕಾರಿದ ಅವರು, “ಯಾರೂ ಅಂಜುವ ಅಗತ್ಯವಿಲ್ಲ. ಈ ತನಿಖೆ ಹೇಗೆ ನಡೆಯುತ್ತಿದೆ ಎಂದು ನೋಡಲು 5 ದಿನ ಸಮಯ ಕೊಡುತ್ತೇನೆ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ತನಿಖೆಯನ್ನು ಹಳ್ಳ ಹಿಡಿಸುವ ಸಂಚು ನಡೆಯುತ್ತಿದೆ. ಸ್ವತಃ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರಿಗೂ ಈ ತನಿಖೆಯ ಬಗ್ಗೆ ಅನುಮಾನವಿದೆ. ಮಾಜಿ ಸಿಎಂ ಬಗ್ಗೆ ಮಾತನಾಡಿಕೊಂಡು ಯಾವ ಕಾರಣಕ್ಕೆ ಬ್ಲ್ಯಾಕ್‌ಮೇಲ್ ಮಾಡಲಾಗಿದೆ? ಇದರ ಸತ್ಯಾಸತ್ಯತೆ ಹೊರಬರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ವಿಕ್ಕಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕಚೇರಿಯ ಲಿಫ್ಟ್ ಹೇಗೆ ಓಪನ್ ಆಯ್ತು? ಆತ ಕೆಳಗೆ ಬೀಳಲು ಕಾರಣವೇನು? ಇದರಲ್ಲಿ ಪ್ರಭಾವಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಂಥದ್ದರಲ್ಲಿ ಯುಡಿಆರ್ ಕೇಸ್ ಏಕೆ ಕ್ಲೋಸ್ ಮಾಡಿದ್ರಿ?” ಎಂದು ಪ್ರಶ್ನಿಸಿದ್ದಾರೆ. ಕೋಲಾರ ಬಳಿ ನಡೆದ ಚಾಲಕನ ಕೊಲೆ ಪ್ರಕರಣವನ್ನೂ ಉಲ್ಲೇಖಿಸಿದ ಹೆಚ್‌ಡಿಕೆ, ಹಲವು ಅನುಮಾನಾಸ್ಪದ ಸಾವುಗಳ ಹಿಂದಿನ ಸತ್ಯ ಹೊರಬರಲು ಸೂಕ್ತ ತನಿಖೆ ಆರಂಭವಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಿನ್ನೆ ವೈರಲ್ ಆಗಿರುವ ವಿಡಿಯೋದಲ್ಲಿರುವವರನ್ನು ತನಿಖೆಗೆ ಕರೆಯಿಸಬೇಕಲ್ವಾ? ಸಾಕ್ಷಿ ಇದ್ದರೆ ಕೊಡಿ ಎನ್ನುವ ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಹಲವಾರು ಪೊಲೀಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರ ವಿಡಿಯೋಗಳನ್ನು ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ನ್ಯಾಯಯುತ ತನಿಖೆ ನಡೆಸದಿದ್ದರೆ ಬೇರೆಯದೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಮ್ಮ ವಾರ್ ರೂಮ್ ಕಾರ್ಯಕರ್ತರು ತಲೆಮರೆಸಿಕೊಂಡಿಲ್ಲ. ಅವರ ಬ್ಯಾಂಕ್ ಖಾತೆ ವಿವರಗಳನ್ನು ಕೇಳುವ ಅಗತ್ಯವೇನಿದೆ? ತನಿಖೆಗೆ ಪೂರ್ಣ ಸಹಕಾರ ನೀಡಲು ನಾವೇ ಸೂಚಿಸಿದ್ದೇವೆ ಎಂದಿರುವ ಅವರು, “ರಾಜ್ಯದ ಸಿಎಂ ಹಾಗೂ ಗೃಹ ಸಚಿವರಿಗೆ ರಾಜ್ಯದ ಗೌರವ ಉಳಿಸಬೇಕೆಂಬ ಕಿಂಚಿತ್ತಾದರೂ ಚಿಂತನೆ ಇದೆಯೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Laxmi News 24×7