ಬೆಂಗಳೂರು: ಆರ್‌ಎಸ್‌ಎಸ್ (RSS) ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ತಿಳಿದುಕೊಳ್ಳಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
RSS ಪಥ ಸಂಚಲನಕ್ಕೆ ಅನುಮತಿ ಪಡೆಯಬೇಕು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, RSS ವಿಚಾರದಲ್ಲಿ ನಾನು ಜಾಸ್ತಿ ಹೇಳಲ್ಲ. 100 ವರ್ಷಗಳ ಹಾದಿಯಲ್ಲಿ ಹೇಗೆ ಇತ್ತೋ ಹಾಗೆ ಇರಬೇಕು. ಇದಕ್ಕೆ ಸರ್ಕಾರಗಳು ಸಹಕಾರ ಕೊಡಬೇಕು. ಸ್ವತಂತ್ರ ಪೂರ್ವದಿಂದ ಏನು ಇದೆಯೋ ಅದಕ್ಕೆ ಸಹಕಾರ ಕೊಡಬೇಕು. ಪ್ರಿಯಾಂಕ್ ಖರ್ಗೆ ವೈಯಕ್ತಿಕ ಪ್ರತಿಷ್ಠೆಗಾಗಿ ಹೀಗೆ ಮಾಡಬಾರದು. ಪ್ರತಿಷ್ಠೆಗಾಗಿ ಕಾನೂನು ಬದಲಾವಣೆ ಆಗಲ್ಲ ಎಂದು ಕಿಡಿಕಾರಿದ್ದಾರೆ.
RSS ಮೇಲೆ ಎಷ್ಟು ಕೇಸ್ ಇದೆ ಅಂತ ನಾನೇ ಪ್ರಶ್ನೆ ಕೇಳಿದ್ದೆ. ಅದಕ್ಕೆ ನೀವೇ ಒಂದೂ ಕೇಸ್ ಇಲ್ಲ ಅಂತ ಉತ್ತರ ಕೊಟ್ಟಿದ್ರಿ. ಹೀಗಿರುವಾಗ RSS ಅದೊಂದು ನಿಷ್ಕಳಂಕ ಸಂಘಟನೆ ಅಲ್ಲವಾ. ಹೀಗಿರುವಾಗ ಪ್ರತಿಷ್ಠೆ ಯಾಕೆ ನಿಮಗೆ? ಯಾರನ್ನೋ ಒಪ್ಪಿಸಲು ಹೀಗೆ ಮಾಡೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಯಸ್ಸಿಗಿಂತ ಹೆಚ್ಚಿನ ಅಧಿಕಾರ ನಿಮಗೆ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಾಗಿದ್ದಾಗ ಹೇಗೆ ನಡೆಸಿಕೊಂಡಿದ್ದರು ಕಲಿತುಕೊಳ್ಳಿ. ಬೆಂಗಳೂರಿನಲ್ಲಿ RSS ಸಮಾವೇಶ ನಡೆದಾಗ ಶಬ್ಬಾಶ್ ಗಿರಿ ಕೊಟ್ಟವರು ಮಲ್ಲಿಕಾರ್ಜುನ ಖರ್ಗೆ. ಅವರ ಮಾತು ಕೇಳಿ. ನಿಮಗೆ ಮಾಡೋಕೆ ಬೇರೆ ಕೆಲಸ ಇದೆ. ದಲಿತರ ಮಾರಣ ಹೋಮ ಆಗ್ತಿದೆ. ಕೊಲೆ, ಸುಲಿಗೆ, ಅತ್ಯಾಚಾರ ಆಗ್ತಿದೆ. ಬಾಂಬ್ ಬ್ಲಾಸ್ಟ್ ಆಗ್ತಿದೆ. ಇದೆಲ್ಲವನ್ನು ಬಿಟ್ಟು RSS ಹಿಂದೆ ಯಾಕೆ ಬಿದ್ದಿದ್ದೀರಾ? ಪ್ರಿಯಾಂಕ್ ಖರ್ಗೆ ನೋಡಿದ್ರೆ ಪಾಪ ಅನ್ನಿಸುತ್ತೆ. ನೀವು ಮಾಡಬೇಕಾದ ತಪ್ಪುಗಳನ್ನು ತಿದ್ದುವ ಕೆಲಸವನ್ನು ನಾನು ಮಾಡಬೇಕು. ನಿಮ್ಮ ನಡವಳಿಕೆ ಸರಿಯಲ್ಲ. ಇದನ್ನ ತಿದ್ದಿಕೊಳ್ಳಿ, ಇಲ್ಲ ನಿಮಗೆ ಸಮಸ್ಯೆಯಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ
Laxmi News 24×7