Breaking News

ಪುಲಕೇಶಿನಗರದಲ್ಲಿ ಸ್ಫೋಟ – ನಿಗೂಢ ರಹಸ್ಯ ಬೇಧಿಸಲು ಎನ್‌ಐಎ ಎಂಟ್ರಿ

Spread the love

ಬೆಂಗಳೂರು: ನಗರದ ಪುಲಕೇಶಿನಗರ ಠಾಣಾ ವ್ಯಾಪ್ತಿಯ ಫ್ರೇಜರ್ ಟೌನ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟ ಪ್ರಕರಣದ ತನಿಖೆ ತೀವ್ರ ಚುರುಕುಗೊಂಡಿದೆ. ಕೃತ್ಯದಲ್ಲಿ ಸುಧಾರಿತ ಸ್ಫೋಟಕ ಸಾಧನ  ಬಳಕೆಯಾಗಿರುವ ಬಲವಾದ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ  ಅಧಿಕೃತವಾಗಿ ಪ್ರವೇಶಿಸಿದ್ದು, ಸ್ಥಳೀಯ ಪೊಲೀಸರಿಂದ ಸಮಗ್ರ ತನಿಖಾ ವರದಿಯನ್ನು ಕೋರಿದೆ.

ಘಟನೆ ಸಂಬಂಧ ಈಗಾಗಲೇ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಕಟ್ಟಡದ ಮಾಲೀಕ ಅಬ್ದುಲ್ ರೆಹಮಾನ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ”ಮನೆ ನಿರ್ಮಾಣದ ಆರಂಭಿಕ ಹಂತದಲ್ಲಿದ್ದ ಗುತ್ತಿಗೆದಾರನನ್ನು ಕೆಲಸದಿಂದ ಬಿಡಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಹಳೆಯ ವೈಷಮ್ಯದಿಂದಾಗಿ ಮಾಜಿ ಗುತ್ತಿಗೆದಾರನೇ ಈ ಕೃತ್ಯ ಎಸಗಿರಬಹುದೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಅನಾಮಧೇಯ ಕರೆಯ ಮೂಲಕ ಪಾರ್ಸೆಲ್ ತಲುಪಿಸಲಾಗಿದೆ ಎನ್ನಲಾದ ಹಿನ್ನೆಲೆಯಲ್ಲಿ, ಆ ಪಾರ್ಸೆಲ್ ತಂದಿಟ್ಟ ನಿಗೂಢ ವ್ಯಕ್ತಿಯ ಪತ್ತೆಗಾಗಿ ಪ್ರತ್ಯೇಕ ಪೊಲೀಸ್ ವಿಶೇಷ ತಂಡ ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಸ್ಫೋಟದ ತೀವ್ರತೆಗೆ ಸಿಲುಕಿ ಗಾಯಗೊಂಡಿರುವ ಸೂರಜ್ ಹಾಗೂ ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯ ಸಂಪೂರ್ಣ ವಿವರ ತಿಳಿಯಲು ಆಸ್ಪತ್ರೆಯಲ್ಲಿರುವ ಕಾರ್ಮಿಕರನ್ನು ವಿಚಾರಣೆಗೊಳಪಡಿಸಲು ಪೊಲೀಸರು ಸಜ್ಜಾಗಿದ್ದು, ವೈದ್ಯರ ಅನುಮತಿ ಹಾಗೂ ಸಲಹೆ ಪಡೆದು ನಾಳೆ ಅವರ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.

ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸಿರುವ ಪುಲಿಕೇಶಿನಗರ ಶಾಸಕ ಎ.ಸಿ. ಶ್ರೀನಿವಾಸ್, ಸ್ಫೋಟದಲ್ಲಿ ಐಇಡಿ ಬಳಕೆಯಾಗಿರುವ ಬಗ್ಗೆ ಬಲವಾದ ಅನುಮಾನವಿದೆ. ಘಟನಾ ಸ್ಥಳದಲ್ಲಿ ದೊರೆತ ಮಾದರಿಗಳನ್ನು ಪ್ರತ್ಯೇಕಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದ್ದು, ವರದಿ ಬಂದ ಬಳಿಕವೇ ಸ್ಪೋಟಕದ ನಿಖರ ಸ್ವರೂಪ ತಿಳಿಯಲಿದೆ ಎಂದು ಹೇಳಿದರು.

ಇದೊಂದು ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರವಾಗಿದ್ದು, ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ. ಅಲ್ಲದೆ, ಘಟನೆ ನಡೆದ ಕಟ್ಟಡದ ಬಗ್ಗೆ ಜಿಬಿಎ (GBA) ವತಿಯಿಂದ ವಿವರ ಕೇಳಲಾಗಿದ್ದು, ಪೊಲೀಸ್ ಆಯುಕ್ತರಿಗೂ ಪತ್ರ ಬರೆಯಲಾಗಿದೆ. ಒಂದು ವೇಳೆ ಕಟ್ಟಡವನ್ನು ನಿಯಮಬಾಹಿರವಾಗಿ ಅಕ್ರಮವಾಗಿ ನಿರ್ಮಿಸುತ್ತಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ಪೊಲೀಸರು ಅವ್ರ ಡ್ಯೂಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಡಿಸಿಎಂ ರಿಯಾಕ್ಷನ್‌

Spread the loveಬೆಂಗಳೂರು: ದಸರಾದಲ್ಲಿ ನಂದಿಧ್ವಜ ಪೂಜೆಗೆ ಮುಖ್ಯಮಂತ್ರಿಗಳೊಂದಿಗೆ  ತೆರಳುತ್ತಿದ್ದ ಸಚಿವರನ್ನು ಎಸ್‌ಪಿ ತಡೆದಿರುವ ಘಟನೆಗೆ ಸಂಬಧಿಸಿದಂತೆ ಉಪಮುಖ್ಯಮಂತ್ರಿ ಜಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ