ಗಡಿಯಾರ, ಕನ್ನಡಕ ಮತ್ತು ಉಂಗುರಗಳಲ್ಲಿ ಕ್ಯಾಮೆರಾ ಅಳವಡಿಸಿ ಸಚಿವರು ಹಾಗೂ ಶಾಸಕರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಲುಕಿಸಲು ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಜನಪ್ರತಿನಿಧಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ಸ್ಟಿಂಗ್ ಕಾರ್ಯಾಚರಣೆಗಳ ಬಗ್ಗೆ ಮುಖ್ಯಮಂತ್ರಿಗಳೇ ಎಚ್ಚರಿಕೆ ನೀಡಿದ್ದಾರೆ . ಇದೇ ವೇಳೆ, ಅಕ್ಟೋಬರ್ 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಲು ಪ್ರತಿದಿನ ನೂರಾರು ಜನರು ಬರುತ್ತಾರೆ. ಹೀಗಿರುವಾಗ ಯಾರು ಯಾವ ಉದ್ದೇಶದಿಂದ ಬರುತ್ತಾರೆ ಎಂಬುದನ್ನು ಪತ್ತೆಹಚ್ಚುವುದು ಸುಲಭವಲ್ಲ. ಸ್ಟಿಂಗ್ ಆಪರೇಷನ್ ನಡೆಸುವವರನ್ನು ಗುರುತಿಸುವುದು ಕಷ್ಟವಾಗಿದ್ದು, ಮಾಧ್ಯಮಗಳಲ್ಲಿ ಇಂತಹ ಕಾರ್ಯಾಚರಣೆಗಳು ಮುಂದುವರಿದರೆ ಜನಪ್ರತಿನಿಧಿಗಳು ಮತ್ತಷ್ಟು ಜಾಗರೂಕರಾಗಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಧರಣಿ ಸಂದರ್ಭದಲ್ಲಿ ರಸ್ತೆಯನ್ನು ಖಾಲಿ ಮಾಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ಯಾರ ಪರವೂ ಇಲ್ಲ, ಯಾರ ವಿರೋಧವೂ ಇಲ್ಲ. ನ್ಯಾಯದ ಪರವಾಗಿ ನಿಂತು ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಕ್ಟೋಬರ್ 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಲಿದ್ದು, ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಿದೆ ಎಂಬ ಚರ್ಚೆಗಳನ್ನೂ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ. ಪಕ್ಷದ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಚುನಾವಣೆಯ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೂ ಮಹತ್ವದ್ದಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Laxmi News 24×7