Breaking News

ಭಾರತೀಯರ ಮತಗಳನ್ನು ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ: ಸಿಎಂ ಡಿಕೆಶಿ

Spread the love

ನವದೆಹಲಿ: ಬಾಂಗ್ಲಾದೇಶ ಹಾಗೂ ಬೇರೆಡೆಗಳಿಂದ ಬಂದು ಜನರು ಇಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ದೇಶದ ಗಡಿಯಲ್ಲಿ ಬಾಂಗ್ಲಾದೇಶದಿಂದ ನುಸುಳಿಕೋರರನ್ನು ತಡೆಗಟ್ಟುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ಹೀಗಾಗಿ ಭಾರತೀಯರ ಮತಗಳನ್ನು ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ  ಕರ್ತವ್ಯ ಎಂದು ಸಿಎಂ ಡಿಕೆ ಶಿವಕುಮಾರ್  ಅವರು ಹೇಳಿದ್ದಾರೆ.

ನವದೆಹಲಿಯಲ್ಲಿ ಎಸ್‌ಐಆರ್ (SIR) ಬಗ್ಗೆ ಮಾತನಾಡಿದ ಅವರು, ಬಿಜೆಪಿಯ ಸಂಸದರು ಹಾಗೂ ಶಾಸಕರು, ನಾವು ಬಾಂಗ್ಲಾದೇಶದವರನ್ನು ಮತಪಟ್ಟಿಯಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಭಾರತೀಯರ ಮತಗಳ ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ನಮ್ಮಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದರೆ ಅವರ ಮತದಾನದ ಹಕ್ಕು ಕಸಿಯುವುದು ಮಾತ್ರವಲ್ಲ, ಅವರನ್ನೇ ದೇಶದಿಂದ ಹೊರಗೆ ಹಾಕಲಿ. ಆ ಕೆಲಸ ಯಾಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. 

ಕೇಂದ್ರದಲ್ಲಿ ಪ್ರತಿಪಕ್ಷಗಳ ಹೋರಾಟದ ಬಗ್ಗೆ ಪೊಲೀಸರ ಕ್ರಮಕ್ಕೆ ಉತ್ತರಿಸಿದ ಅವರು, ಹೋರಾಟಗಾರರ ವಿರುದ್ಧ ಪೊಲೀಸರು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರು ದೇಶದ ಪ್ರಜಾಪ್ರಭುತ್ವ ಹಾಗೂ ಜನರ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂದಿದ್ದಾರೆ.

ಅರ್ಹ ಮತಗಳನ್ನು ಅಳಿಸಿಹಾಕದಂತೆ ಚುನಾವಣಾ ಆಯೋಗದ ಸ್ಪಷ್ಟ ಸೂಚನೆ:
ರಾಜ್ಯದಲ್ಲಿ ಬಿಜೆಪಿಯವರು ತಮ್ಮ ಬಡ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಪೂರ್ವಮುದ್ರಿತ ಫಾರಂ 7ಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಅಲ್ಪಸಂಖ್ಯಾತ ಮತದಾರರ ಪೂರ್ವ ಮುದ್ರಿತ ಅರ್ಜಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾಗುತ್ತಿದೆ. ಕೆಲವು ಬಿಜೆಪಿ ಕಾರ್ಯಕರ್ತರು ತಪ್ಪೊಪ್ಪಿಗೆ ಮಾಡಿಕೊಂಡು ಅರ್ಜಿಗಳನ್ನು ವಾಪಸ್ಸು ಪಡೆದಿದ್ದಾರೆ. ಕೇಂದ್ರ ಸರ್ಕಾರದವರು ಈ ಮತಗಳ್ಳತನವನ್ನು ಒಂದು ದೊಡ್ಡ ಕ್ರಿಮಿನಲ್ ಸಂಚು ಎಂದು ಏಕೆ ಪರಿಗಣಿಸಲಿಲ್ಲ? ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ನಮ್ಮ ಹೋರಾಟದ ನಂತರ ಚುನಾವಣಾ ಆಯೋಗವೂ, ಸೂಕ್ತ ಪರಿಶೀಲನೆಯಿಲ್ಲದೇ ಯಾವುದೇ ಅರ್ಹ ಮತವನ್ನು ತೆಗೆದುಹಾಕಬಾರದೆಂದು ಸ್ಪಷ್ಟ ಸೂಚನೆ ನೀಡಿದೆ. ನಾವು ಆ ಹೋರಾಟ ಮಾಡದೇ ಇದ್ದಿದ್ದರೆ, ಬಡ ಹಳ್ಳಿಗರು, ಅನಕ್ಷರಸ್ಥರ ಮತಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಈಗ ಚುನಾವಣಾ ಆಯೋಗವು, ದೇಶಾದ್ಯಂತ ಯಾವುದೇ ವಸತಿಯಿಲ್ಲದವರು, ಶೋಷಿತರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಒಂದು ತಿಂಗಳ ಕಾಲ ಅಭಿಯಾನದ ರೀತಿಯಲ್ಲಿ ಮತಗಳ ರಕ್ಷಣೆ ಮಾಡಬೇಕೆಂದು ತಿಳಿಸಿದೆ ಎಂದಿದ್ದಾರೆ.

ಮುಖ್ಯಮಂತ್ರಿಯಾಗಿ ರಾಜ್ಯದ ಪ್ರತಿಯೊಬ್ಬರ ಮತರಕ್ಷಣೆ ನನ್ನ ಕರ್ತವ್ಯ:
ಮತಗಳನ್ನು ರಕ್ಷಿಸುವ ಕಾರ್ಯವು ಬೆಂಗಳೂರಿನಿಂದ ಪ್ರಾರಂಭವಾಗಿದ್ದು, ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ರಾಜ್ಯದ ಪ್ರತಿ ನಾಗರಿಕನ ಮತದ ಹಕ್ಕನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯವಲ್ಲವೇ? ಬಿಜೆಪಿಯವರು ಮತಗಳ್ಳತನ ಮಾಡಲು ಇಂತಹ ಹಂತಕ್ಕೆ ತಲುಪುವರೆಂಬ ಕಲ್ಪನೆ ನಮಗಿರಲಿಲ್ಲ. ಚುನಾವಣೆ ಗೆಲ್ಲಲು ಮೊದಲು ರಾಜ್ಯದ ಹಾಗೂ ದೇಶದ ಜನರ ಮನಸ್ಸನ್ನು ಗೆಲ್ಲಬೇಕು. ಆದರೆ ಬಿಜೆಪಿಯವರು ಚುನಾವಣಾ ಆಯೋಗದ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮತದಾನ ಹಕ್ಕಿಗೆ ಹೋರಾಡುತ್ತಿರುವ ಇಂಡಿಯಾ ಬ್ಲಾಕ್‌ನ ನಾಯಕರಿಗೆ ಅಭಿನಂದನೆ:
ರಾಜ್ಯದಲ್ಲಿ ನಡೆಯುತ್ತಿರುವ ಈ ಮತಗಳ ಅಕ್ರಮದ ಬಗ್ಗೆ ವಿಚಾರಿಸಲು ಸರ್ಕಾರಕ್ಕೆ ಅಧಿಕಾರವಿಲ್ಲವೇ? ಇಂತಹ ಕ್ರಿಮಿನಲ್ ಸಂಚಿನ ವಿರುದ್ಧ ನಾವು ಧ್ವನಿಯೆತ್ತಿದ್ದು, ಮಾಧ್ಯಮಗಳೂ ನಮಗೆ ಸಹಕರಿಸಿವೆ. ಈ ಮೂಲಕ ಮಾಧ್ಯಮದವರು ಅರ್ಹಮತದಾರರ ನೆರವಿಗೆ ನಿಂತಿದ್ದಾರೆ. ಆದ್ದರಿಂದ ನವದೆಹಲಿಯಲ್ಲಿ ದೇಶದ ಮತದಾರನ ಹಿತರಕ್ಷಣೆಗೆ ಹೋರಾಡುತ್ತಿರುವ ಇಂಡಿಯಾ ಬ್ಲಾಕ್‌ನ ನಾಯಕರಿಗೆ ನಾನು ಅಭಿನಂದಿಸುತ್ತೇನೆ. ಇದರಿಂದ ದೇಶದ ಪ್ರಜಾಪ್ರಭುತ್ವ ಹಾಗೂ ಮತಗಳನ್ನು ರಕ್ಷಿಸಲಾಗುತ್ತಿದೆ ಎಂದಿದ್ದಾರೆ.

ಕಾನೂನು ಚೌಕಟ್ಟಿನಲ್ಲಿ ಪ್ರಜಾಪ್ರಭುತ್ವ ಉಳಿಸುತ್ತೇನೆ:
ಎಸ್.ಐ.ಆರ್ ಕುರಿತು ಕೇಳಿದಾಗ, ನಾನು ಜಿ ಎಸ್ ಟಿ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದು, ನಮ್ಮ ರಾಜ್ಯದಲ್ಲಿ ಎಸ್ ಐ ಆರ್ ಕುರಿತ ಸಂಪೂರ್ಣ ಮಾಹಿತಿ ತಿಳಿಸಲು ದಾಖಲೆಗಳನ್ನು ನಮ್ಮ ನಾಯಕರಿಗೆ ಒಪ್ಪಿಸಲಾಗುವುದು. ಅವರೆಲ್ಲಾ ಸದ್ಯಕ್ಕೆ ಬಿಡುವಿಲ್ಲದಿರುವುದರಿಂದ ಗೋವಾದಲ್ಲಿ ನಡೆಯಲಿರುವ ಪಕ್ಷದ ಸಭೆಗೆ ಹೋಗಿ ದಾಖಲೆಗಳನ್ನು ಸಲ್ಲಿಸುತ್ತೇನೆ. ನಂತರ ನಾಯಕರ ಸೂಚನೆ ಮೇರೆಗೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರು ಸೇರಿದಂತೆ ಎನ್‌ಡಿಎ ನಾಯಕರು ರಾಜ್ಯಪಾಲರ ಕಚೇರಿಗೆ ಹೋಗಿ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡುವ ಹಕ್ಕಿಲ್ಲ ಎಂದು ಹೇಳುತ್ತಿರುವುದೇಕೆ? ಇದು ಕ್ರಿಮಿನಲ್ ಚಟುವಟಿಕೆಯಲ್ಲವೇ? ಕೊಲೆಯಾಗುವ ಮುನ್ನ ನಾವು ಕೊಲೆಯನ್ನು ತಪ್ಪಿಸಿದ್ದೇವೆ. ರಾಜ್ಯಪಾಲರ ಕಚೇರಿಗೆ ತೆರಳಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ರಾಜ್ಯಪಾಲರು ನಮ್ಮ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣ ದಾಖಲಿಸುತ್ತಿರುವುದೇಕೆ ಎಂದು ಕೇಳಿದ್ದಾರೆ. ಇಲ್ಲಿ ನಡೆದಿರುವುದು ಅಪರಾಧವಲ್ಲವೇ? ರಾಜ್ಯದ ಮುಖ್ಯಮಂತ್ರಿಯಾಗಿ ಮತದಾರರ ಹಕ್ಕು ಉಳಿಸುವುದು ನನ್ನ ಕರ್ತವ್ಯವಲ್ಲವೇ? ಬಿಜೆಪಿ ನಾಯಕರು ಇಂತಹ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಗರು ಜನರ ಹೃದಯ ಗೆದ್ದು ಚುನಾವಣೆ ಗೆಲ್ಲಬೇಕು. ಅದನ್ನು ಬಿಟ್ಟು ಚುನಾವಣಾ ಆಯೋಗ ಮೂಲಕ ಇಂತಹ ಅಕ್ರಮ ಮಾಡುತ್ತಿದೆ. ರಾಜ್ಯದಲ್ಲಿ ಇಷ್ಟು ಅಕ್ರಮ ನಡೆಯುತ್ತಿರುವಾಗ ಅಗತ್ಯ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಬದುಕಿರುವವರನ್ನು ಸತ್ತಿದ್ದಾರೆ ಎಂದು ಸುಳ್ಳು ಹೇಳಿ ಮತದಾನದ ಹಕ್ಕು ಕಸಿಯುವುದು ಅಕ್ರಮವಲ್ಲವೇ? ಇದು ಅಪರಾಧ ಪಿತೂರಿಯಾಗಿದೆ. ಅಮಾಯಕ ಬಿಜೆಪಿ ಕಾರ್ಯಕರ್ತರಿಗೆ ಈ ಕೆಲಸ ಒಪ್ಪಿಸಿರುವುದು. ಬಿಜೆಪಿ ಕಾರ್ಯಕರ್ತರು ಎಲ್ಲಿ ತಮ್ಮ ಹೆಸರು ಬಯಲು ಮಾಡುತ್ತಾರೋ ಎಂದು ಹೆದರಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸಿ, ಕಾನೂನಿನ ರೀತಿ ಕ್ರಮಕೈಗೊಂಡು ಪ್ರಜಾಪ್ರಭುತ್ವ ಉಳಿಸುತ್ತೇನೆ ಎಂದಿದ್ದಾರೆ.

ದೇಶದ ಅತಿದೊಡ್ಡ ಕುತಂತ್ರ:
ಮತದಾರರ ಹೆಸರುಗಳನ್ನು ಅಳಿಸಿಹಾಕಲು ನಡೆಸಿರುವ ಪ್ರಯತ್ನ ದೇಶದ ಅತಿ ದೊಡ್ಡ ಕುತಂತ್ರವಾಗಿದೆ. ಮತದಾನದ ಹಕ್ಕು ಬದುಕಿನ ಹಕ್ಕಾಗಿದೆ. ವಿರೋಧ ಪಕ್ಷದ ನಾಯಕರಾಗಿ ಪ್ರತಿ ಮತದಾನವನ್ನು ಉಳಿಸುವುದು ರಾಹುಲ್ ಗಾಂಧಿ ಅವರ ಕರ್ತವ್ಯವಾಗಿದೆ. ದೇಶದಲ್ಲಾಗಿರುವ ಮತಗಳ್ಳತನದ ಬಗ್ಗೆ ಚುನಾವಣಾ ಆಯೋಗದ ಸದಸ್ಯರಿಂದ ಈಗಾಗಲೇ ಬಹಿರಂಗಗೊಂಡಿದೆ.

ನ್ಯಾಯಾಲಯಗಳೂ ಕೂಡ ಇದನ್ನು ಒಪ್ಪಿದ್ದು, ನ್ಯಾಯವನ್ನು ಎತ್ತಿ ಹಿಡಿದಿರುವುದಕ್ಕಾಗಿ ನಾನು ಅಭಿನಂದಿಸುತ್ತೇನೆ. ಕರ್ನಾಟಕದಲ್ಲಿ ಲಕ್ಷಾಂತರ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಮೂನೆ-7 ಅರ್ಜಿಗಳನ್ನು ಮುದ್ರಣ ಮಾಡಲಾಗಿದೆ. ದಲಿತ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತದಾರರ ಹೆಸರು ಹಾಗೂ ವಿಳಾಸ ನಮೂದಿಸಿ ಸ್ಥಳೀಯ ಬಿಜೆಪಿ ನಾಯಕರಿಗೆ ನಮೂನೆ -7 ನೀಡಲಾಗಿದೆ. ಅರ್ಜಿಗಳನ್ನು ನೀಡಿದವರ ಐಡಿ ಕಾರ್ಡ್, ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಈ ಬಗ್ಗೆ ದೂರು ನೀಡಿದ ಬೆನ್ನಲ್ಲೆ ಬಿಎಲ್‌ಒಗಳನ್ನು ಬೆದರಿಸಿ ಅರ್ಜಿಗಳನ್ನು ವಾಪಸ್ಸು ಪಡೆದಿದ್ದಾರೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಅಂಬಾರಿ ತೂಕ ತಡೆಯಲಾಗದೇ ತಾಲೀಮು ಅರ್ಧಕ್ಕೆ ಮೊಟಕು – ಬಹುತೇಕ ಕ್ಯಾಪ್ಟನ್ ರೇಸ್‌ನಿಂದ ಮಹೇಂದ್ರ ಔಟ್

Spread the loveಮೈಸೂರು: ಈ ಬಾರಿ ದಸರಾದಲ್ಲಿ  ಅಂಬಾರಿ ಹೊರುವ ಆನೆ ಯಾವುದು ಅನ್ನೋದು ಇನ್ನೂ ಕುತೂಹಲವಾಗಿಯೇ ಇದೆ. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ