Breaking News

ಅಡವಿ ದೇವರ ಮೊರೆ ಹೋದ ಮಾವುತರು, ಕಾವಾಡಿಗರು – ದಸರಾ ನಿರ್ವಿಘ್ನವಾಗಿ ನಡೆಯಲಿ ಎಂದು ವಿಶೇಷ ಪೂಜೆ

Spread the love

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ  ಮಹೋತ್ಸವ ನಿರ್ವಿಘ್ನವಾಗಿ ನಡೆಯಲಿ ಎಂದು ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿಗರು ಅಡವಿ ದೇವರ ಮೊರೆ ಹೋಗಿದ್ದಾರೆ.

ನಾಗರಹೊಳೆ ಅರಣ್ಯದಲ್ಲಿರುವ ಅಜ್ಜಯ್ಯ, ಅಜ್ಜಮ್ಮ ಹಾಗೂ ಮಾಸ್ತಮ್ಮ ದೇವರ ಗುಡಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಪ್ರಾರ್ಥಿಸಿದ್ದಾರೆ. ಹುಣ್ಣಿಮೆ ದಿನದಂದು ದಸರಾ ಗಜಪಡೆಯ 12 ಆನೆಗಳ ಮಾವುತರು ಹಾಗೂ ಕಾವಾಡಿಗರು ಮೂರು ಪ್ರತ್ಯೇಕ ದೇವರ ಗುಡಿಗಳಿಗೆ ತೆರಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಹೂವು, ಹಣ್ಣು, ತೆಂಗಿನಕಾಯಿ ಸಮರ್ಪಿಸಿ, ಗಂಧದ ಕಡ್ಡಿ ಹಾಗೂ ಕರ್ಪೂರದಿಂದ ಆರತಿ ಬೆಳಗಿದರು. ಜಂಬೂಸವಾರಿ ಸಂದರ್ಭದಲ್ಲಿ ತಮಗೆ ವಹಿಸುವ ಜವಾಬ್ದಾರಿಯನ್ನು ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ನಿಭಾಯಿಸುವ ಶಕ್ತಿ ನೀಡುವಂತೆ ಅಡವಿ ದೇವರಲ್ಲಿ ಮೊರೆ ಇಟ್ಟಿದ್ದಾರೆ. ದಸರಾ ವೇಳೆ ಯಾವುದೇ ತಾಪತ್ರಯ, ಅಹಿತಕರ ಘಟನೆಗಳು ಸಂಭವಿಸದಂತೆ ಗಜಪಡೆ ಹಾಗೂ ಸಿಬ್ಬಂದಿಯನ್ನು ಕಾಪಾಡುವಂತೆಯೂ ಪ್ರಾರ್ಥಿಸಿದ್ದಾರೆ.

ಇತ್ತೀಚೆಗೆ ಸೆಪ್ಟೆಂಬರ್ 25ರಂದು ನಡೆದ ಮರದ ಅಂಬಾರಿ ತಾಲೀಮು ವೇಳೆ ಧಾರಾಕಾರ ಮಳೆ ಸುರಿದ ಪರಿಣಾಮ ತಾಲೀಮು ಮೊಟಕುಗೊಂಡಿತ್ತು. ಇದರಿಂದ ಮಾವುತರು ಹಾಗೂ ಕಾವಾಡಿಗರಲ್ಲಿ ಕೊಂಚ ಆತಂಕವೂ ಮೂಡಿತ್ತು. ಈ ಹಿನ್ನೆಲೆಯಲ್ಲಿ ಅಡವಿ ದೇವರ ಆಶೀರ್ವಾದ ಪಡೆದು ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸುವ ಸಂಕಲ್ಪ ಮಾಡಿದ್ದಾರೆ. ಗಣಗೂರು, ಅಮ್ಮಳೆ ಹಾಗೂ ಬಳ್ಳೆಹಾಡಿ ಸಮೀಪದಲ್ಲಿರುವ ಮೂರು ದೇವರ ಗುಡಿಗಳಲ್ಲಿ ಪೂಜೆ ನೆರವೇರಿಸಲಾಯಿತು. ಮಾವುತರು ಮತ್ತು ಕಾವಾಡಿಗರ ಈ ನಂಬಿಕೆಗೆ ಅರಣ್ಯಾಧಿಕಾರಿಗಳೂ ಸಾಥ್ ನೀಡಿದ್ದಾರೆ.

ನಾಗರಹೊಳೆ ಹಾಗೂ ಬಂಡೀಪುರ ಆನೆ ಶಿಬಿರಗಳ ಮಾವುತರು, ಕಾವಾಡಿಗರಲ್ಲಿ ಅಡವಿ ದೇವರ ಆರಾಧನೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ದಸರಾ ಗಜಪಡೆಯ ಗಜಪಯಣಕ್ಕೂ ಮುನ್ನ ಹಾಗೂ ದಸರಾ ಮಹೋತ್ಸವ ಆರಂಭಕ್ಕೂ ಮುನ್ನ ಅಡವಿ ದೇವರಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ. ಅಡವಿ ದೇವರ ಆಶೀರ್ವಾದದೊಂದಿಗೆ ದಸರಾ ಮಹೋತ್ಸವವನ್ನು ಯಾವುದೇ ವಿಘ್ನವಿಲ್ಲದೆ ಯಶಸ್ವಿಗೊಳಿಸುವ ಸಂಕಲ್ಪದೊAದಿಗೆ ಮಾವುತರು ಹಾಗೂ ಕಾವಾಡಿಗರು ತಮ್ಮ ಕರ್ತವ್ಯದತ್ತ ಮರಳಿದ್ದಾರೆ.


Spread the love

About Laxminews 24x7

Check Also

ರೇಣುಕಾಸ್ವಾಮಿ ಕೊಲೆ ಕೇಸ್‌- ಸುಪ್ರೀಂನಲ್ಲೂ ದರ್ಶನ್‌ಗೆ ಬಿಗ್‌ ಶಾಕ್‌

Spread the loveನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ  ಮತ್ತೊಂದು ಭಾರಿ ಕಾನೂನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ