Breaking News

ಕಣ್ಣಿಗೆ ಕಾಣದ ಲೋಕಕ್ಕೆ ಭರವಸೆಯ ಬೆಳಕು; ಬಿಡಿಎ ಅಧ್ಯಕ್ಷ ಪೀಠದಲ್ಲಿ ಅಂಧ ಬಾಲಕ!

Spread the love

ಬೆಂಗಳೂರು: ಸರ್ಕಾರಿ ಕಚೇರಿಗಳೆಂದರೆ ಕೇವಲ ಕಡತಗಳ ವಿಲೇವಾರಿ, ಗಂಭೀರ ಮುಖಭಾವದ ಅಧಿಕಾರಿಗಳು ಮತ್ತು ಸಾರ್ವಜನಿಕರ ದೂರು-ದುಮ್ಮಾನಗಳ ತಾಣ ಎಂಬ ಭಾವನೆಯೇ ಹೆಚ್ಚು. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಇಂದು ಅತ್ಯಂತ ಅಪರೂಪದ ಹಾಗೂ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿಯಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ, ‘ಜ್ಯೋತಿ ಸೇವಾ ಸ್ಕೂಲ್ ಫಾರ್ ಬ್ಲೈಂಡ್’ ಶಾಲೆಯ 65 ದೃಷ್ಟಿಹೀನ ಮುಗ್ಧ ಮಕ್ಕಳನ್ನು ಬಿಡಿಎ ಕಚೇರಿಗೆ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಅಂದು ನಡೆದ ಘಟನೆ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸಿತು.

ಬಿಡಿಎ ಅಧ್ಯಕ್ಷರಾದ ಎನ್.ಎ.ಹ್ಯಾರಿಸ್ ಅವರು, ತಮ್ಮ ಅಧಿಕೃತ ಕುರ್ಚಿಯ ಮೇಲೆ ರಾಹುಲ್ ಎಂಬ ದೃಷ್ಟಿಹೀನ ಬಾಲಕನನ್ನು ಕೂರಿಸಿ, ಸಾಂಕೇತಿಕವಾಗಿ ‘ಒಂದು ದಿನದ ಬಿಡಿಎ ಅಧ್ಯಕ್ಷ’ನನ್ನಾಗಿ ಮಾಡಿದರು.

ಆ ಆಸನದಲ್ಲಿ ಕುಳಿತ ರಾಹುಲ್ ಮುಖದಲ್ಲಿ ಅರಳಿದ ಮುಗ್ಧ ನಗೆ ಇಡೀ ಸಭಾಂಗಣಕ್ಕೆ ಹೊಸ ಚೈತನ್ಯ ತುಂಬಿತು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಹ್ಯಾರಿಸ್, ‘ಯಾರೂ ಧೃತಿಗೆಡಬೇಡಿ. ನೀವೂ ಸಮಾಜದ ಪ್ರತಿಯೊಬ್ಬರಂತೆ ಸಮಾನರು. ನಿಮ್ಮೊಂದಿಗೆ ನಾವಿದ್ದೇವೆ, ಸರ್ಕಾರವಿದೆ. ದೃಢಸಂಕಲ್ಪದಿಂದ ಓದಿ ಉನ್ನತ ಸ್ಥಾನಗಳನ್ನು ಅಲಂಕರಿಸಿ’ ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಬಿಡಿಎ ಆಯುಕ್ತರಾದ ಮೇಜರ್ ಪಿ.ಮಣಿವಣ್ಣನ್ ಅವರು ಮಾತನಾಡಿ, ‘ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಕನಸುಗಳನ್ನು ಚಿಗುರಿಸುವುದೇ ಈ ಭೇಟಿಯ ಮೂಲ ಉದ್ದೇಶ. ಕೇವಲ ಭೇಟಿಗೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಇವರ ಶಿಕ್ಷಣ ಹಾಗೂ ಉಜ್ವಲ ಭವಿಷ್ಯಕ್ಕೆ ಬಿಡಿಎ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಭರವಸೆ ನೀಡಿದರು.

‘ನಾವು ಎಂದೂ ಸರ್ಕಾರಿ ಕಚೇರಿಗಳನ್ನು ನೋಡಿರಲಿಲ್ಲ, ಆಡಳಿತ ಹೇಗೆ ನಡೆಯುತ್ತದೆ ಎಂಬುದರ ಕಲ್ಪನೆಯೂ ಇರಲಿಲ್ಲ. ಆದರೆ, ಇಂದು ನಮಗೂ ದೊಡ್ಡ ಅಧಿಕಾರಿಗಳಾಗುವ, ಸಮಾಜಕ್ಕೆ ಸೇವೆ ಸಲ್ಲಿಸುವ ಆತ್ಮವಿಶ್ವಾಸ ಬಂದಿದೆ’ ಎಂದು ಮಕ್ಕಳು ಸಂಭ್ರಮದಿಂದ ಹಂಚಿಕೊಂಡ ಮಾತುಗಳು ನೆರೆದಿದ್ದ ಎಲ್ಲ ಅಧಿಕಾರಿಗಳ ಹೃದಯ ತಟ್ಟಿದವು.

ಅಧಿಕಾರಿಗಳು ಮಕ್ಕಳೊಂದಿಗೆ ಮುಕ್ತವಾಗಿ ಬೆರೆತು ಪ್ರೀತಿ, ವಾತ್ಸಲ್ಯದಿಂದ ಪ್ರೋತ್ಸಾಹಿಸಿದರು. ಗಂಭೀರತೆಯಿಂದ ಕೂಡಿರುತ್ತಿದ್ದ ಬಿಡಿಎ ಕಚೇರಿಯಲ್ಲಿ ಅಂದು ಅನುಕಂಪಕ್ಕಿಂತ ಮಿಗಿಲಾಗಿ ಸಮಾನತೆ, ಭರವಸೆ ಮತ್ತು ಪ್ರೀತಿಯ ವಾತಾವರಣ ತುಂಬಿ ತುಳುಕುತ್ತಿತ್ತು. ದೃಷ್ಟಿ ಇಲ್ಲದಿದ್ದರೂ ಬದುಕಿನ ಉನ್ನತ ಗುರಿಗಳನ್ನು ಕಾಣಬಲ್ಲೆವು ಎಂಬ ಆತ್ಮವಿಶ್ವಾಸ ಆ ಮಕ್ಕಳ ಮೊಗದಲ್ಲಿ ಎದ್ದು ಕಾಣುತ್ತಿತ್ತು.


Spread the love

About Laxminews 24x7

Check Also

ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

Spread the loveಹುಬ್ಬಳ್ಳಿ: ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ  ನಡೆದಿದೆ. ಹುಬ್ಬಳ್ಳಿ ಉಣಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ