ಚಿಕ್ಕಮಗಳೂರು: ಶೌಚಾಲಯಕ್ಕಾಗಿ ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದಲ್ಲಿ ನಡೆದಿದೆ.
ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ನಡೆದ ಜನಸೇವಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಶಾಸಕರ ಎದುರೇ ಶೌಚಾಲಯಕ್ಕಾಗಿ ಕಣ್ಣೀರಿಟ್ಟಿದ್ದಾರೆ. ಅಧಿಕಾರಿಗಳು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ್ದೀರಾ ಎಂದು ಪ್ರಶ್ನಿಸಿದಾಗ ಮಹಿಳೆ ಇಲ್ಲ ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹಿಳೆ ಎಂದಿದ್ದಾರೆ. ಆಗ ಅಧಿಕಾರಿಗಳು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ್ದರೆ ಏನೋ ಮಾಡಬಹುದಿತ್ತು. ಆದರೆ, ಜನರಲ್ ಕೆಟಗರಿಗೆ ಸೇರುತ್ತೀರಾ ಎಂದು ಹೇಳಿದ್ದಾರೆ.
ಅಧಿಕಾರಿಗಳ ಈ ಮಾತು ನೊಂದ ಮಹಿಳೆಗೆ ಮತ್ತಷ್ಟು ಬೇಸರ ತರಿಸಿ ಶೌಚಾಲಯಕ್ಕೂ ಜಾತಿ ಬೇಕಾ? ಎಂದು ತುಂಬಿದ ಸಭೆಯಲ್ಲಿ ಗೋಳಾಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಆದರೆ, ಒಂದು ಶೌಚಾಲಯ ನಿರ್ಮಿಸಿಕೊಡಲು ಒಂದಷ್ಟು ಕಾನೂನನ್ನ ಅಧಿಕಾರಿಗಳು ಸಡಿಲಿಸಿದರು ತಪ್ಪೇನಿಲ್ಲ. ಆದರೆ, ಮಹಿಳೆ ಶೌಚಾಲಯಕ್ಕಾಗಿ ಐದಾರು ವರ್ಷಗಳಿಂದ ಮನವಿ ಮೇಲೆ ಮನವಿ ಮಾಡಿ ಅಧಿಕಾರಿಗಳ ಬಳಿ ಎಡತಾಕಿದ್ದಾರೆ.
ಅಧಿಕಾರಿಗಳು ಪ್ರತಿಸಲ ಒಂದೊಂದು ಸಬೂಬು ಹೇಳಿ ಮಹಿಳೆಯನ್ನ ಸಾಗಾಕುತ್ತಿದ್ದರು. ಆದರೆ, ಶನಿವಾರ ನಡೆದ ಜನ ಸೇವಾ ಕಾರ್ಯಕ್ರಮದಲ್ಲಿ ಮಹಿಳೆಯ ಕಣ್ಣೀರು ಕಂಡು ಶಾಸಕ ರಾಜೇಗೌಡ ಅಧಿಕಾರಿಗಳಿಗೆ ಮಹಿಳೆಗೆ ಶೌಚಾಲಯ ನಿರ್ಮಿಸಿಕೊಡುವಂತೆ ಸೂಚಿಸಿದ್ದಾರೆ. ಅದರಂತೆ, ಭಾನುವಾರ ತಾಲೂಕು ಮಟ್ಟದ ಕೆಲ ಅಧಿಕಾರಿಗಳು ಚಿಮ್ಮೆ ಗ್ರಾಮಕ್ಕೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಡಲು ಮಹಿಳೆಗೆ ಇರುವ ತಾಂತ್ರಿಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ.
Laxmi News 24×7