Breaking News

5 ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ; ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು

Spread the love

ಮಡಿಕೇರಿ: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸುಮಾರು 19 ವರ್ಷದ ಗಂಡಾನೆಯೊಂದು ಮೃತಪಟ್ಟಿದೆ.

ಕಾದಾಟದಲ್ಲಿ ಗಾಯಗೊಂಡು, ಮುರಿದ ದಂತದೊಂದಿಗೆ ಶಿಬಿರಕ್ಕೆ ಬಂದಿದ್ದ ಆನೆಗೆ ಅರಣ್ಯ ಇಲಾಖೆ ಕಳೆದ ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ ನೀಡಿತ್ತು. ತಜ್ಞ ವೈದ್ಯರ ತಂಡದಿಂದಲೂ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇಂದು ಬೆಳಗ್ಗೆ ಆನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಆನೆಯನ್ನು ಪ್ರತ್ಯೇಕವಾಗಿಟ್ಟು, ಯಾವುದೇ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಆರೈಕೆ ಮಾಡಲಾಗಿತ್ತು. ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕ ಔಷಧಿ, ಗಾಯಗಳಿಗೆ ಚಿಕಿತ್ಸೆ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು.

ಹೆಚ್ಚಿನ ತಜ್ಞ ಚಿಕಿತ್ಸೆಗೆ ವೈಲ್ಡ್‌ಲೈಫ್ ಎಸ್‌ಒಎಸ್ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನೂ ಕರೆಸಿ ಜಂಟಿಯಾಗಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಡೆಸಿದ ಡಿಜಿಟಲ್ ಎಕ್ಸ್-ರೇ ಪರೀಕ್ಷೆಯಲ್ಲಿ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ಪತ್ತೆಯಾಗಿತ್ತು. ತಜ್ಞ ವೈದ್ಯರ ಸಲಹೆಯಂತೆ ಸುಧಾರಿತ ಚಿಕಿತ್ಸೆಯನ್ನು ಮುಂದುವರಿಸಲಾಗಿತ್ತು.

ಕಾಲಿನ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಜೊತೆಗೆ, ಗಾಯಗೊಂಡ ಕಾಲನ್ನು ಸ್ಥಿರವಾಗಿಡಲು ಸೆ. 27ರಂದು ತಜ್ಞರ ಮೂಲಕ ಫೈಬರ್‌ಗ್ಲಾಸ್ ಬ್ಯಾಂಡೇಜ್ ಅಳವಡಿಸಲಾಗಿತ್ತು.ಆದರೆ, ಇಂದು ಬೆಳಗ್ಗೆ 9:50ರ ಸುಮಾರಿಗೆ ಆನೆ ಏಕಾಏಕಿ ಕುಸಿದು ಬಿದ್ದಿದೆ. ಕೂಡಲೇ ತುರ್ತು ಗ್ಲುಕೋಸ್ ಹಾಗೂ ಐವಿ ಚಿಕಿತ್ಸೆ ಸೇರಿದಂತೆ ತೀವ್ರ ನಿಗಾ ವಹಿಸಿದರೂ, ಚಿಕಿತ್ಸೆ ಫಲಿಸದೆ ಆನೆ ಕೊನೆಯುಸಿರೆಳೆದಿದೆ.

ಸದ್ಯ ಆನೆಯ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ದೀರ್ಘಕಾಲದ ಮೂಳೆ ಮುರಿತದ ಸಮಸ್ಯೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ.

ದುಬಾರೆ ಆನೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆಯ ಸಾವು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.


Spread the love

About Laxminews 24x7

Check Also

ಸಿಎಂ ಆಗಿದ್ದಾಗಲೇ ನೈಸ್‌ ರದ್ದು ಮಾಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ: ಹೆಚ್‌ಡಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು

Spread the loveಬೆಂಗಳೂರು: ಹೆಚ್‌ಡಿ ಕುಮಾರಸ್ವಾಮಿ ಅವರೇ ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಪೆನ್ನು-ಪೇಪರ್ ಕೈಯಲ್ಲಿದ್ದಾಗಲೇ ನೈಸ್‌ ಯೋಜನೆಯನ್ನು  ರದ್ದು ಮಾಡಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ