Breaking News

ಗೊಡ್ಡು ಬೆದರಿಕೆಗೆ ಹೆದರಲ್ಲ, ನನ್ನ ಆಸ್ತಿ ಬಗ್ಗೆ ಕೇಳಲು ಅವರೇನು ಐಟಿ ಅಧಿಕಾರಿನಾ: ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು

Spread the love

ನವದೆಹಲಿ: ನಾನು ಯಾವುದೇ ಗೊಡ್ಡು ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಹೆದರುವ ಜಾಯಮಾನದವನಲ್ಲ. ನನ್ನ ಬಳಿ ಆಸ್ತಿ ಇದೆ, ಯಾಕೆ ಇರಬಾರದು? ನನ್ನ ಆಸ್ತಿ ಬಗ್ಗೆ ಕೇಳಲು ಅವರೇನು ಆದಾಯ ತೆರಿಗೆ ಅಧಿಕಾರಿಯೇ ಎಂದು ಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ನೈಸ್‌ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್‌ಡಿಕೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ನೈಸ್ ಯೋಜನೆಗೆ ಕುಮಾರಸ್ವಾಮಿ ಅವರ ತಂದೆ ಹೆಚ್.ಡಿ. ದೇವೇಗೌಡರೇ ಸಹಿ ಹಾಕಿದ್ದು, ಸ್ವತಃ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಹಲವು ಬೇನಾಮಿ ಹಗರಣಗಳು ನಡೆದಿವೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯಿಂದ ತೀವ್ರ ಒತ್ತಡ ಇರುವುದರಿಂದ ಕುಮಾರಸ್ವಾಮಿ ಬಹಳ ಹತಾಶರಾಗಿದ್ದಾರೆ. ಇಷ್ಟು ದಿನ ಯಾಕೆ ಸುಮ್ಮನಿದ್ದರು? ನೈಸ್ ಜೊತೆಗಿನ ಇವರ ವ್ಯವಹಾರ ಕೆಟ್ಟುಹೋಗಿದ್ದಕ್ಕೆ ಈಗ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನನ್ನ ಹಾಗೂ ನನ್ನ ಕುಟುಂಬದ ಆಸ್ತಿ ಗಳಿಕೆಯನ್ನು ಸಮರ್ಥಿಸಿಕೊಂಡ ಸಿಎಂ, ನನ್ನ ಮಕ್ಕಳು ಕಾನೂನು ವ್ಯಾಪ್ತಿಯಲ್ಲೇ ಆಸ್ತಿ ಖರೀದಿ ಮಾಡಿದ್ದಾರೆ. ಅವರಿಗೆ ಸಾಮರ್ಥ್ಯವಿದ್ದರೆ ಇನ್ನೂ ಖರೀದಿ ಮಾಡುತ್ತಾರೆ. ನಾನು ಲಂಚ ಪಡೆದಿಲ್ಲ, ವ್ಯಾಪಾರ-ವ್ಯವಹಾರ ಮಾಡುವ ಶಕ್ತಿ ನನಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಎಲ್ಲವನ್ನೂ ಅಧಿಕೃತವಾಗಿ ಘೋಷಿಸಿದ್ದೇನೆ. ನೈಸ್ ಪ್ಲಾನಿಂಗ್ ಅಥಾರಿಟಿ ವ್ಯಾಪ್ತಿಯಲ್ಲಿ ಇವರ ಹಾಗೂ ಇವರ ಕುಟುಂಬದ ಆಸ್ತಿ ಇಲ್ಲವೇ? ಊರು ಬಿಟ್ಟು ಬಂದು ಇವರು ಆಸ್ತಿ ಮಾಡಿಲ್ಲವೇ? ಇವರ ಅಣ್ಣ-ತಮ್ಮಂದಿರ ಆಸ್ತಿ ಎಲ್ಲೆಲ್ಲಿದೆ ಎಂಬುದು ನಮಗೂ ಗೊತ್ತಿದೆ ಎಂದರು.

ಕುಮಾರಸ್ವಾಮಿ ಸಿನಿಮಾ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದವರು, ಸುಳ್ಳು ಹೇಳುವುದೇ ಅವರ ಮನೆ ದೇವರು ಎಂದು ಲೇವಡಿ ಮಾಡಿದ ಸಿಎಂ, “ಅವರು ಹೇಳುವುದೆಲ್ಲವೂ ಕೇವಲ ಕಟ್ಟುಕಥೆ. ಈ ಹಿಂದೆ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿಸಿದವರು ಯಾರನ್ನೂ ಬಿಟ್ಟಿಲ್ಲ, ನನ್ನನ್ನು ಬಿಡುತ್ತಾರೆಯೇ? ತಮ್ಮ ತಂದೆಯನ್ನೇ ಬಿಡದ ಸಂಸ್ಕಾರ, ಸಂಸ್ಕೃತಿ ಇಲ್ಲದ ವ್ಯಕ್ತಿಯ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ನಮ್ಮ ಸರ್ಕಾರದ ಜನಪ್ರಿಯತೆ ತಡೆಯಲಾಗದೇ ಅಸೂಯೆಯಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಅವರದ್ದೇ ಬಿಜೆಪಿ ಸರ್ಕಾರವಿದೆ, ನನ್ನ ವಿರುದ್ಧ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಎಲ್ಲಾ ತನಿಖೆಗಳೂ ಆಗಿವೆ, ಇನ್ನೇನು ಮಾಡಬೇಕೋ ಮಾಡಿಕೊಳ್ಳಲಿ. ವಿಧಾನಸೌಧದ ಮುಂದೆ ನಿಂತು ಮಾಧ್ಯಮಗಳ ಎದುರು ಮಾತನಾಡುವುದಲ್ಲ, ಧೈರ್ಯವಿದ್ದರೆ ಈ ವಿಚಾರವನ್ನು ವಿಧಾನಸಭೆಗೆ ತರಲಿ, ಅಲ್ಲಿಯೇ ಚರ್ಚೆ ಮಾಡೋಣ ಎಂದು ನೇರ ಸವಾಲು ಎಸೆದರು.


Spread the love

About Laxminews 24x7

Check Also

ಸಿಎಂ ಆಗಿದ್ದಾಗಲೇ ನೈಸ್‌ ರದ್ದು ಮಾಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ: ಹೆಚ್‌ಡಿಕೆಗೆ ಕೃಷ್ಣ ಬೈರೇಗೌಡ ತಿರುಗೇಟು

Spread the loveಬೆಂಗಳೂರು: ಹೆಚ್‌ಡಿ ಕುಮಾರಸ್ವಾಮಿ ಅವರೇ ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಪೆನ್ನು-ಪೇಪರ್ ಕೈಯಲ್ಲಿದ್ದಾಗಲೇ ನೈಸ್‌ ಯೋಜನೆಯನ್ನು  ರದ್ದು ಮಾಡಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ