ಹೈದರಾಬಾದ್: ಶಿಕ್ಷಕರೆಂದರೆ ವಿದ್ಯಾರ್ಥಿಗಳಿಗೆ ಬದುಕುಕಟ್ಟಿಕೊಡುವ ಮಾರ್ಗದರ್ಶಕ. ಆದರೆ ಇಂದಿನ ಜಗತ್ತಿನಲ್ಲಿ ಕೆಲವು ಕಡೆ ಶಿಕ್ಷಕ ಎನ್ನುವ ಪದದ ಅರ್ಥ ಬೇರೆಯೇ ಆಗಿಬಿಟ್ಟಿದೆ. ತೆಲಂಗಾಣದಲ್ಲಿ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ಬೇರೊಬ್ಬನ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಒತ್ತಾಯದಿಂದ ಕೀಟನಾಶಕ ಸೇವಿಸಿ ಉಪನ್ಯಾಸಕ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಥಂಡ್ರಾ ಅಕ್ಷಿತಾರಾಣಿ (20) ಹಾಗೂ ಬಂಧಿತ ಲೆಕ್ಚರ್‌ನನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತ ಯುವತಿ ನಸ್ಪೂರಿನ ಕಾಲೇಜುವೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುವಾಗ ಲೆಕ್ಚರರ್ ನವೀನ್ ಕುಮಾರ್ ಪರಿಚಯವಾಗಿದ್ದ. ಬಳಿಕ ಅಲ್ಲಿಂದ ಯುವತಿ ಹೈದರಾಬಾದ್‌ಗೆ ಮೈನಿಂಗ್ ಎಂಜಿನಿಯರಿಂಗ್ ಮಾಡಲು ತೆರಳಿದ್ದಳು. ಅಲ್ಲಿ ಅಪ್ರೆಂಟಿಸ್‌ಶಿಪ್ ಸಮಯದಲ್ಲಿ ರವಿ ಕುಮಾರ್ ಎಂಬಾತನ ಪರಿಚಯವಾಗಿತ್ತು. ಬರಬರುತ್ತಾ ನವೀನ್ ಹಾಗೂ ಅಕ್ಷಿತಾರಾಣಿ ನಡುವಿನ ಸಂಬಂಧ ಹದಗೆಟ್ಟಿತ್ತು. ರವಿ ಜೊತೆಗೆ ಸಂಬಂಧ ಬೆಳೆಸುತ್ತಿರುವುದರಿಂದ ಅಕ್ಷಿತಾರಾಣಿ ನನ್ನಿಂದ ದೂರವಾಗುತ್ತಿದ್ದಾಳೆ ಎಂದು ನವೀನ್ ಕೋಪಗೊಂಡಿದ್ದ.
ಅದಾದ ಬಳಿಕ ಸೆ.12ರಂದು ಅಕ್ಷಿತಾರಾಣಿ ಡೆತ್‌ನೋಟ್ ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದೇ ನಂಬಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಅಸಹಜ ಸಾವು ಎಂದು ಪರಿಗಣಿಸಿ, ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ.
ಪೆದ್ದಪಲ್ಲಿ ಡಿಸಿಪಿ ಬಿ.ರಾಮ್ ರೆಡ್ಡಿ ಅವರು ಈ ಬಗ್ಗೆ ಮಾತನಾಡಿ, ಅಕ್ಷಿತಾರಾಣಿ ತನ್ನಿಂದ ದೂರ ಸರಿಯುತ್ತಿರುವುದನ್ನು ಮತ್ತು ರವಿ ಕುಮಾರ್ ಜೊತೆ ಹತ್ತಿರವಾಗುತ್ತಿರುವುದನ್ನು ನವೀನ್ ಸಹಿಸಿಕೊಳ್ಳಲು ಸಾಧ್ಯವಾಗಿದೇ, ಈ ಕೊಲೆ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.
ಕೊಲೆ ನಡೆದಿದ್ದು ಹೇಗೆ?
ಸೆ.12ರಂದು ಅಕ್ಷಿತಾರಾಣಿ ಮನೆಗೆ ವಾಪಸ್ ಬರುವಾಗ ನವೀನ್ ಕುಮಾರ್ ಅಡ್ಡಗಟ್ಟಿದ್ದ. ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದು, ರವಿ ಕುಮಾರ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪತ್ರ ಬರೆಯುವಂತೆ ಒತ್ತಾಯಮಾಡಿ, ಕೊನೆಗೆ ಕೀಟನಾಶಕ ಕುಡಿಸಿದ್ದ. ಬಳಿಕ ಅಕ್ಷಿತಾರಾಣಿಗೆ ಕೂಡಲೇ ಸಿಗಬೇಕಿದ್ದ ವೈದ್ಯಕೀಯ ಚಿಕಿತ್ಸೆಗೂ ನವೀನ್ ಉದ್ದೇಶಪೂರ್ವಕವಾಗಿ ತಡಮಾಡಿಸಿದ್ದ.
ನಂತರ ಯುವತಿಯ ಮೊಬೈಲ್ ಮೂಲಕ ತಂದೆಗೆ ಕರೆ ಮಾಡಿ, ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರನ್ನು ನಂಬಿಸಿದ್ದ. ಆನಂತರ ಅಕ್ಷತಾರಾಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮರುದಿನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.
ರಹಸ್ಯ ಬಯಲಾಗಿದ್ದೇಗೆ?
ಕೊಲೆಯ ರಹಸ್ಯವನ್ನು ಭೇದಿಸಲು ಸಿಸಿಟಿವಿ, ಕಾಲ್ ಲಾಗ್, ಕಾಲ್ ರೆಕಾರ್ಡಿಂಗ್ ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಅಸಲಿ ರಹಸ್ಯ ಗೊತ್ತಾಗಿದೆ. ಸದ್ಯ ಪೊಲೀಸರು ಆರೋಪಿ ನವೀನ್ ಕುಮಾರ್ ಹಾಗೂ ರವಿ ಕುಮಾರ್‌ನನ್ನು ಬಂಧಿಸಿದ್ದಾರೆ. ತನಿಖೆಯ ಭಾಗವಾಗಿ ಒಂದು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ರವಿ ಕುಮಾರ್ ವಿರುದ್ಧ ಅಕ್ಷಿತಾರಾಣಿ ಮಾಡಿರುವ ಬಲವಂತದ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ಆದರೆ ರವಿ ಕುಮಾರ್ ವಿರುದ್ಧದ ಆರೋಪಗಳನ್ನು ಅವರ ಪತ್ನಿ ತಳ್ಳಿಹಾಕಿದ್ದಾರೆ.
Laxmi News 24×7