ತುಮಕೂರು: ರಾಜ್ಯದಲ್ಲಿ ಉದ್ದೇಶಪೂರ್ವಕವಾಗಿ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಡ್ರೋಜನ್ ಜನರೇಟರ್ ಪ್ಲಾಂಟ್ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಕೆಲವು ಕಡೆಗಳಲ್ಲಿ ಲೋಡ್‌ಶೆಡ್ಡಿಂಗ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಪಷ್ಟಪಡಿಸಿದರು.
ತುಮಕೂರು ದಸರಾ ಅದ್ಧೂರಿ ಆಚರಣೆಗೆ ಸಿದ್ಧತೆ
ನಾಡಹಬ್ಬ ದಸರಾ ಆಚರಣೆಗೆ ತುಮಕೂರು ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮೈಸೂರಿನಲ್ಲಿ ನಡೆಯುವ ದಸರಾ ಮಾದರಿಯಲ್ಲಿ, ಹಿಂದಿನ ಪದ್ಧತಿ ಮತ್ತು ನಿಯಮಗಳನ್ನು ಪಾಲಿಸಿಕೊಂಡು ಕಳೆದ ಎರಡು ವರ್ಷಗಳಿಂದ ತುಮಕೂರಿನಲ್ಲಿ ದಸರಾ ಆಚರಿಸಲಾಗುತ್ತಿದೆ. ದಸರಾವನ್ನ ಕೇವಲ ಒಂದು ಕಾರ್ಯಕ್ರಮವಾಗಿ ಸೀಮಿತಗೊಳಿಸದೆ, ಊರ ಹಬ್ಬವಾಗಿ, ನಾಡ ಹಬ್ಬವಾಗಿ ಎಲ್ಲರೂ ಭಾಗವಹಿಸುವಂತೆ ಆಚರಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸ್ಥಳೀಯ ಸಾಂಸ್ಕೃತಿಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮೂಲಕ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷಗಳ ದಸರಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈ ಬಾರಿಯೂ ಅದೇ ರೀತಿಯಲ್ಲಿ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮೈಸೂರು ದಸರಾ ಸಂಬಂಧ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಕ್ರಮಗಳನ್ನು ಅಂತಿಮಗೊಳಿಸಲಾಗಿದೆ ಎಂದರು.
ಅಕ್ಟೋಬರ್ 11ರಿಂದ ಧಾರ್ಮಿಕ ಕಾರ್ಯಕ್ರಮಗಳು
ಅಕ್ಟೋಬರ್ 11ರಂದು ಬೆಳಗ್ಗೆ 5 ಗಂಟೆಯಿಂದ ದಸರಾ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 9 ಗಂಟೆಗೆ ದಸರಾ ಹಬ್ಬದ ಸಂಭ್ರಮದ ಅಧಿಕೃತ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀಗಳು ಸೇರಿದಂತೆ ಪ್ರಮುಖ ಮಠಾಧಿಪತಿಗಳು, ಜಿಲ್ಲೆಯ ಶಾಸಕರು ಹಾಗೂ ಸಂಸದರು ಭಾಗವಹಿಸಲಿದ್ದಾರೆ. ಈಗಾಗಲೇ ನಿಗದಿಪಡಿಸಿರುವಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಪರಮೇಶ್ವರ್ ಹೇಳಿದರು.
ಹೆಲಿಕಾಪ್ಟರ್ ರೈಡ್, ಸಾಂಸ್ಕೃತಿಕ ಕಾರ್ಯಕ್ರಮ
ದಸರಾ ಅಂಗವಾಗಿ ಹೆಲಿಕಾಪ್ಟರ್ ರೈಡ್, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರೈತರು, ಯುವಕರು, ಮಹಿಳೆಯರು ಹಾಗೂ ಸಾಹಿತಿಗಳಿಗೆ ತಮ್ಮ ಪ್ರತಿಭೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಲಾಗುವುದು ಎಂದರು.
ಕಳೆದ ಬಾರಿಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ದೀಪಾಲಂಕಾರ ಮಾಡಲಾಗುವುದು. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ದಸರಾ ಕೊನೆಯ ಮೂರು ದಿನಗಳು ಹೆಚ್ಚಿನ ಮನರಂಜನಾ ಕಾರ್ಯಕ್ರಮಗಳಿಗೆ ಮೀಸಲಾಗಿರಲಿವೆ. ಖ್ಯಾತ ಕಲಾವಿದರು ಹಾಗೂ ಕಲಾ ಮಾಧ್ಯಮದವರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಈ ಬಾರಿ ಅಂಬಾರಿ ಹೊರಲಿದೆಯೇ ಆನೆ ‘ರಾಮ’?
ತುಮಕೂರು ದಸರಾಕ್ಕೆ ಆನೆಗಳ ವಿಚಾರದಲ್ಲೂ ಚರ್ಚೆ ನಡೆದಿದೆ. ಈ ಹಿಂದೆ ಲಕ್ಷ್ಮಿ, ರಾಮ ಸೇರಿದಂತೆ ಮೂರು ಆನೆಗಳು ಇದ್ದವು. ಈ ಬಾರಿ ‘ರಾಮ’ ಮೈಸೂರಿಗೆ ತೆರಳಿರುವುದರಿಂದ, ಆತನೇ ಅಂಬಾರಿ ಹೊರುವ ಸಾಧ್ಯತೆ ಇದೆ ಎಂದು ಪರಮೇಶ್ವರ್ ಹೇಳಿದರು.
ತುಮಕೂರು ದಸರಾಕ್ಕಾಗಿ ಅಂಬಾರಿ ಹೊರಲು ಆನೆಯನ್ನು ನೀಡುವಂತೆ ಮನವಿ ಮಾಡಲಾಗಿದೆ. ಬನ್ನಿ ಕಡೆಯುವ ಮೂಲಕ ದಸರಾ ಸಮಾರೋಪಗೊಳ್ಳಲಿದೆ ಎಂದರು.
ದಸರಾ ನೆಪದಲ್ಲಿ ಸರ್ಕಾರಿ ಕೆಲಸ ನಿಲ್ಲಿಸುವಂತಿಲ್ಲ
ದಸರಾ ಆಚರಣೆಯ ನೆಪದಲ್ಲಿ ಯಾವುದೇ ಸರ್ಕಾರಿ ಕೆಲಸವನ್ನ ನಿಲ್ಲಿಸಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಪರಮೇಶ್ವರ್ ಹೇಳಿದರು.
ಯಾವುದೇ ಸಾರ್ವಜನಿಕ ಕೆಲಸ ಅಥವಾ ಸರ್ಕಾರಿ ಕೆಲಸವನ್ನು ದಸರಾ ನೆಪದಲ್ಲಿ ನಿಲ್ಲಿಸಬಾರದು. ಕಂದಾಯ ಇಲಾಖೆ ಸಚಿವನಾಗಿ ಈ ಬಗ್ಗೆ ಆದೇಶ ನೀಡಿದ್ದೇನೆ. ಎಸ್‌ಐಆರ್ ಕಾರ್ಯಕ್ಕೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ವಿಎಒಗಳು ತಮ್ಮ ಕರ್ತವ್ಯ ನಿರ್ವಹಿಸಲೇಬೇಕು. ಕೆಲಸ ಮಾಡದಿದ್ದಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಪ್ರಮುಖ ಕೆಲಸಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೆ ದಸರಾ ಆಚರಣೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು.
ಬರ ಪರಿಸ್ಥಿತಿ: ಹೆಚ್ಚುವರಿ ತಾಲೂಕುಗಳು ಸೇರ್ಪಡೆ
ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಪರಮೇಶ್ವರ್, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ನಾಳೆ ಮತ್ತೊಂದು ಅಧಿಸೂಚನೆ ಹೊರಬರುವ ಸಾಧ್ಯತೆ ಇದ್ದು, ಹೆಚ್ಚುವರಿ ತಾಲೂಕುಗಳನ್ನು ಕೂಡ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗುವುದು. ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಸಚಿವರೊಂದಿಗೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸಲಾಗುವುದು. ತುಮಕೂರು ಜಿಲ್ಲೆಯಲ್ಲಿ ಒಟ್ಟು 10 ತಾಲೂಕುಗಳಿದ್ದು, ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರೈತರಿಗೆ ಮೇವು ಮತ್ತು ಬೆಳೆ ಖರೀದಿ ನೆರವು
ಮಳೆ ಹಾಗೂ ಮೇವು ಕೊರತೆಯ ಹಿನ್ನೆಲೆಯಲ್ಲಿ ಜನರು ಊರು ಬಿಟ್ಟರೂ ಪರಿಸ್ಥಿತಿಯ ಕುರಿತು ದಿನನಿತ್ಯದ ಮಾಹಿತಿ ಪಡೆಯಲಾಗುತ್ತಿದೆ. ಈಗಾಗಲೇ ಒಂದು ತಿಂಗಳಿನಿಂದ ಮೇವು ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.
ಬೆಳೆ ಹಾಕಿದ ಬಳಿಕ ಸುಮಾರು 15 ದಿನಗಳಲ್ಲಿ ಬೆಳೆ ಸಿದ್ಧವಾಗುವ ಸಂದರ್ಭದಲ್ಲಿ, ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಮೂಲಕ ರೈತರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.
Laxmi News 24×7