ಉಡುಪಿ: ಜಿಲ್ಲೆಯ ಕರಾವಳಿ , ಪ್ರಕೃತಿ ಹಾಗೂ ಜಲ ಪ್ರವಾಸೋದ್ಯಮದ ಸಾಮರ್ಥ್ಯವನ್ನ ಪರಿಣಾಮಕಾರಿಯಾಗಿ ಬಳಸಿಕೊಂಡು, ಧಾರ್ಮಿಕ ಪ್ರವಾಸೋದ್ಯಮದ ಜೊತೆಗೆ ಜಿಲ್ಲೆಯ ಇತರೆ ಪ್ರವಾಸಿ ತಾಣಗಳನ್ನೂ ಅಭಿವೃದ್ಧಿಪಡಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಸೋದ್ಯಮ ಸಚಿವರಾದ ಕೆ.ಜೆ ಜಾರ್ಜ್ ಅವರ ನಿರ್ದೇಶನದಂತೆ ಇಂದು ಅಧಿಕಾರಿಗಳ ತಂಡದೊಂದಿಗೆ ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನ ಪರಿಶೀಲಿಸಿದ ಅವರು, ಪ್ರವಾಸಿಗರು ಜಿಲ್ಲೆಯಲ್ಲಿ ಹೆಚ್ಚಿನ ದಿನಗಳ ಕಾಲ ತಂಗುವಂತೆ ಹೊಸ ಪ್ರವಾಸಿ ಆಕರ್ಷಣೆಗಳು ಮತ್ತು ಪೂರಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರನ್ನ ಜಿಲ್ಲೆಯ ಕರಾವಳಿ ಮತ್ತು ನೈಸರ್ಗಿಕ ತಾಣಗಳತ್ತ ಸೆಳೆಯುವ ರೀತಿಯಲ್ಲಿ ಯೋಜನೆ ರೂಪಿಸುವಂತೆ ಸೂಚಿಸಿದರು.
ತ್ರಾಸಿ–ಮರವಂತೆ ಅಭಿವೃದ್ಧಿಗೆ ವೇಗ
ತ್ರಾಸಿ–ಮರವಂತೆ ಬೀಚ್ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಕಾರ್ಯದರ್ಶಿಗಳು, ಕಾಮಗಾರಿಗಳಿಗೆ ವೇಗ ನೀಡಿ ಮುಂದಿನ 2–3 ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸೂಚಿಸಿದರು. ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಸೋಮೇಶ್ವರ ಬೀಚ್ ಮತ್ತು ಕೋಡಿ ಹಿನ್ನೀರು
ಸೋಮೇಶ್ವರ ಬೀಚ್ನಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸಿ, ತಾಣವನ್ನು ಮತ್ತಷ್ಟು ಆಕರ್ಷಕಗೊಳಿಸುವ ಕುರಿತು ಪರಿಶೀಲಿಸಲಾಯಿತು. ಕುಂದಾಪುರದ ಕೋಡಿ ಹಿನ್ನೀರು ಪ್ರದೇಶದಲ್ಲಿ ಪರಿಸರ ಸ್ನೇಹಿ ಹೌಸ್ಬೋಟ್ ಹಾಗೂ ಜಲ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಸಾಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಈ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯ ಬಳಸಿಕೊಳ್ಳುವಂತೆ ಸೂಚಿಸಲಾಯಿತು.
ಸ್ಥಳೀಯ ಆರ್ಥಿಕತೆಗೆ ಪ್ರವಾಸೋದ್ಯಮದ ಬಲ
ಪ್ರವಾಸಿಗರ ವಾಸ್ತವ್ಯ ಅವಧಿ ಹೆಚ್ಚಿಸುವ ಮೂಲಕ ಹೋಟೆಲ್, ಸಾರಿಗೆ, ಆಹಾರ, ಪ್ರವಾಸಿ ಸೇವೆಗಳು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಿ, ಸ್ಥಳೀಯ ಯುವಕರಿಗೆ ಉದ್ಯೋಗ ಮತ್ತು ಉದ್ಯಮ ಅವಕಾಶಗಳನ್ನು ಸೃಷ್ಟಿಸುವುದು ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಉಡುಪಿ ಜಿಲ್ಲೆಯ ಸ್ಥಳೀಯ ಕಲೆ, ಸಂಸ್ಕೃತಿ, ಆಹಾರ ಮತ್ತು ಕರಾವಳಿಯ ವಿಶಿಷ್ಟ ಜೀವನಶೈಲಿಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸುವ ಮೂಲಕ ಪ್ರವಾಸಿಗರಿಗೆ ಸಮಗ್ರ ಅನುಭವ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ತಂಡದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ (ಕರಾವಳಿ ಪ್ರವಾಸೋದ್ಯಮ) ಸೌಮ್ಯ ಬಾಪಟ್, ಉಡುಪಿ ಸಹಾಯಕ ನಿರ್ದೇಶಕಿ ವಿದ್ಯಾವತಿ, IPE Global ತಂಡದ PMU ಪ್ರತಿನಿಧಿ ಹೇಮಲತಾ ಹಾಗೂ DTC ಮತ್ತು KTILನ ಎಂಜಿನಿಯರ್ಗಳು ಉಪಸ್ಥಿತರಿದ್ದರು.
Laxmi News 24×7