ಧಾರವಾಡ: ನೇಪಾಳ ಹಾಗೂ ಚೀನಾ ಗಡಿ ಪ್ರದೇಶದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ನಡುವೆ ಧಾರವಾಡ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಅವರ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಧಾರವಾಡದ ಸಿ.ಬಿ.ನಗರದ ರಾಕೇಶ್ ನಾಯಕ ಸದ್ಯ ನೇಪಾಳದಲ್ಲಿ ನಾಪತ್ತೆಯಾಗಿರುವವರು. ಮೂಲತಃ ಎಂಜಿನಿಯರ್ ಆಗಿರುವ ರಾಕೇಶ್ ಕಳೆದ 12 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
ಆಗಸ್ಟ್ 12ರಂದು ಆಸ್ಟ್ರೇಲಿಯಾದಿಂದ ದೆಹಲಿಗೆ ಬಂದಿದ್ದ ರಾಕೇಶ್, ಅಲ್ಲಿಂದ ಇಶಾ ಫೌಂಡೇಶನ್ ತಂಡವನ್ನು ಸೇರಿಕೊಂಡು ಮಾನಸ ಸರೋವರ ಹಾಗೂ ಕೈಲಾಸ ಪರ್ವತ ವೀಕ್ಷಣೆಗೆ ಪ್ರವಾಸ ಕೈಗೊಂಡಿದ್ದರು. ಆಸ್ಟ್ರೇಲಿಯಾದಿಂದ ಒಬ್ಬರೇ ಭಾರತಕ್ಕೆ ಬಂದಿದ್ದ ಅವರು, ದೆಹಲಿಯಿಂದ ಇಶಾ ಫೌಂಡೇಶನ್ ತಂಡದೊಂದಿಗೆ ಪ್ರವಾಸ ಮುಂದುವರಿಸಿದ್ದರು.
ದೆಹಲಿಗೆ ಬಂದ ಸಂದರ್ಭದಲ್ಲಿ ರಾಕೇಶ್ ಅವರು ಧಾರವಾಡದಲ್ಲಿರುವ ತಮ್ಮ ತಾಯಿ ಪ್ರಮಿಳಾ ಪ್ರಸಾದ್ ಹಾಗೂ ತಂದೆ ಶಿವಪ್ರಸಾದ್ ಅವರೊಂದಿಗೆ ಮಾತನಾಡಿದ್ದರು. ಬಳಿಕ ಪ್ರವಾಸಕ್ಕೆ ತೆರಳಿದ ಎರಡು ದಿನಗಳ ನಂತರ ಅವರ ಸಂಪರ್ಕ ಕಡಿತಗೊಂಡಿದೆ.
ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಲೇ ರಾಕೇಶ್ ಅವರ ಸಂಪರ್ಕ ಕಡಿತಗೊಂಡಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಅವರು ಸುರಕ್ಷಿತ ಸ್ಥಳದಲ್ಲಿರುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ರಾಕೇಶ್ ಅವರ ಸ್ನೇಹಿತ ಶ್ರೇಯಸ್ ಕೂಡ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶ್ರೇಯಸ್ ಈಗಾಗಲೇ ಭಾರತಕ್ಕೆ ಬಂದಿದ್ದು, ರಾಕೇಶ್ ನಾಪತ್ತೆಯಾಗಿರುವ ವಿಚಾರ ತಿಳಿದು ಧಾರವಾಡದಲ್ಲಿರುವ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ಅಲ್ಲದೇ ಚೀನಾ, ನೇಪಾಳ ಹಾಗೂ ಭಾರತದ ರಾಯಭಾರಿ ಕಚೇರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇಶಾ ಫೌಂಡೇಶನ್ ಕೂಡ ತನ್ನ ಪ್ರವಾಸಿಗರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ನೇಪಾಳದ ಸುರಕ್ಷಿತ ಕಟ್ಟಡವೊಂದರಲ್ಲಿ ಹಲವು ಜನರು ಆಶ್ರಯ ಪಡೆದಿದ್ದಾರೆ ಎನ್ನಲಾಗಿದ್ದು, ರಾಕೇಶ್ ಕೂಡ ಅಲ್ಲಿರಬಹುದು ಎಂಬ ನಿರೀಕ್ಷೆಯನ್ನು ಕುಟುಂಬಸ್ಥರು ಹೊಂದಿದ್ದಾರೆ.
ರಾಕೇಶ್ ಅವರು ಪತ್ನಿ ಹಾಗೂ ಮಕ್ಕಳನ್ನು ಆಸ್ಟ್ರೇಲಿಯಾದಲ್ಲೇ ಬಿಟ್ಟು ಭಾರತಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಸದ್ಯ ಧಾರವಾಡದಲ್ಲಿರುವ ಅವರ ತಂದೆ-ತಾಯಿ ಮಗ ಸುರಕ್ಷಿತವಾಗಿ ಮರಳಿ ಬರಲಿ ಎಂದು ಕಾತರದಿಂದ ಕಾಯುತ್ತಿದ್ದಾರೆ.
Laxmi News 24×7