Breaking News

ಯುಜಿ ಸಿಇಟಿ ಅಂತಿಮ ಫಲಿತಾಂಶ ಪ್ರಕಟ, ಕಾಲೇಜು ಪ್ರವೇಶಕ್ಕೆ ಆ.28 ಕೊನೆ ದಿನ: ಕೆಇಎ

Spread the love

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ಯುಜಿ ಸಿಇಟಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.

ಸಿಇಟಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೆ ಆ.25ರಿಂದ 28ರವರೆಗೆ ಸಮಯ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಶುಲ್ಕ ಪಾವತಿಸಿ ತಮಗೆ ಹಂಚಿಕೆಯಾಗಿರುವ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ.ಎಸ್ಸಿ. ನರ್ಸಿಂಗ್, ಬಿ-ಫಾರ್ಮ, ಫಾರ್ಮ್-ಡಿ, ಬಿಪಿಟಿ, ಬಿಪಿಒ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಚಾಯ್ಸ್-1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿ ಕಾಲೇಜಿಗೆ ಪ್ರವೇಶ ಪಡೆಯಬಹುದು.

ಸಿಕ್ಕಿರುವ ಸೀಟು ಇಷ್ಟವಾಗದ ಅಭ್ಯರ್ಥಿಗಳು ಚಾಯ್ಸ್-4 ಆಯ್ಕೆ ಮಾಡಿಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಬಹುದು ಎಂದು ಅವರು ತಿಳಿಸಿದ್ದಾರೆ.

ಚಾಯ್ಸ್-1 ಆಯ್ಕೆ ಮಾಡಿಕೊಂಡು ಸಿಇಟಿ ಕೋರ್ಸ್‌ಗೆ ಪ್ರವೇಶ ಪಡೆದ ಅಭ್ಯರ್ಥಿಗಳು ಇನ್ನೂ ಉತ್ತಮ ಸೀಟಿನ ನಿರೀಕ್ಷೆಯಲ್ಲಿದ್ದರೆ, ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಲಾಗಿನ್ ಮೂಲಕ ಭಾಗವಹಿಸಬಹುದು. ಒಂದು ವೇಳೆ ಚಾಯ್ಸ್-1 ಆಯ್ಕೆ ಮಾಡದೆ ಮೂರನೇ ಸುತ್ತಿನಲ್ಲಿ ಭಾಗವಹಿಸಲು ಬಯಸಿದರೆ, ಎರಡನೇ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟನ್ನು 5,000 ರೂ. ದಂಡ ಪಾವತಿಸಿ ರದ್ದುಪಡಿಸಬೇಕು. ಬಳಿಕ ಮೂರನೇ ಸುತ್ತಿನಲ್ಲಿ ಲಾಗಿನ್ ಆಗಿ, ಹೊಸದಾಗಿ ನೋಂದಣಿ ಶುಲ್ಕ ಪಾವತಿಸಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ. 

ವೈದ್ಯಕೀಯ, ದಂತ ವೈದ್ಯಕೀಯ ಸೀಟು ಪಡೆದವರಿಗೆ ನಿರ್ಗಮನ ಅವಕಾಶ
ಎಂಸಿಸಿ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಕೆಇಎ ಕೌನ್ಸೆಲಿಂಗ್‌ನಿಂದ ಉಚಿತವಾಗಿ ಹೊರ ಹೋಗಲು ಅವಕಾಶ ನೀಡಲಾಗಿದೆ. ಬಳಿಕ ಅಂತಹ ಅಭ್ಯರ್ಥಿಗಳಿಂದ ತೆರವಾಗುವ ಸೀಟುಗಳನ್ನು ಸೇರಿಸಿಕೊಂಡು ಮತ್ತೊಮ್ಮೆ ಮೊದಲ ಸುತ್ತಿನ ಸೀಟು ಹಂಚಿಕೆ  ಮಾಡಲಾಗುವುದು ಎಂದು ಪ್ರಸನ್ನ ತಿಳಿಸಿದ್ದಾರೆ.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ತಾತ್ಕಾಲಿಕ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ. ಕೆಲವು ಅಭ್ಯರ್ಥಿಗಳು ರಾಜ್ಯದ ಕೆಇಎ ಕೌನ್ಸೆಲಿಂಗ್ ಹಾಗೂ ಎಂಸಿಸಿ ನಡೆಸುವ ಕೌನ್ಸೆಲಿಂಗ್ ಎರಡರಲ್ಲೂ ಸೀಟು ಪಡೆದಿದ್ದಾರೆ. ಅಂತಹ ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಚಾಯ್ಸ್-4 ಆಯ್ಕೆ ಮಾಡಿಕೊಂಡು ಕೆಇಎ ಕೌನ್ಸೆಲಿಂಗ್‌ನಿಂದ ಉಚಿತವಾಗಿ ಹೊರ ಹೋಗಬಹುದು ಎಂದು ಅವರು ತಿಳಿಸಿದ್ದಾರೆ.

ಆ.25 ಮತ್ತು 26ರಂದು ನಿರ್ಗಮಿಸಲು ಅವಕಾಶ ನೀಡಲಾಗಿದೆ. ಇದರಿಂದ ಮೊದಲ ಸುತ್ತಿನಲ್ಲೇ ಇತರ ಅರ್ಹ ಅಭ್ಯರ್ಥಿಗಳಿಗೆ ಅವರ ಆಯ್ಕೆಯಂತೆ ಸೀಟು ಲಭ್ಯವಾಗುವ ಸಾಧ್ಯತೆ ಇದೆ ಎಂದು ಪ್ರಸನ್ನ ವಿವರಿಸಿದ್ದಾರೆ.


Spread the love

About Laxminews 24x7

Check Also

ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

Spread the loveಯಾದಗಿರಿ: ಭೀಮಾ ನದಿಯಲ್ಲಿ  ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ  ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ