ಬೆಂಗಳೂರು: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿ ವತಿಯಿಂದ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗ್ಗೆ 9:30ಕ್ಕೆ ಸ್ವಾತಂತ್ರ್ಯ ಉದ್ಯಾನದಿಂದ ಪ್ರತಿಭಟನೆ ಆರಂಭವಾಗಲಿದೆ. ಬಳಿಕ ಬಿಜೆಪಿ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಪ್ರತಿಭಟನೆ ಮುಂದುವರಿಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಪಕ್ಷದವರು ಕೂಡ ಸಹಕಾರ ನೀಡಲಿದ್ದಾರೆ ಎಂದು ಅಶೋಕ್ ತಿಳಿಸಿದರು.
ಇಡೀ ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿದೆ
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಗಲು-ರಾತ್ರಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ದಲಿತರ ಹಣ ದುರ್ಬಳಕೆಯಾಗಿದೆ ಎಂಬ ಆರೋಪವನ್ನು ರಾಜ್ಯದ ಜನರೂ ಖಂಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಜನರು ಕೂಡ ಧ್ವನಿ ಎತ್ತಿರುವುದರಿಂದ ಇಡೀ ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿದೆ ಎಂದು ಅವರು ಆರೋಪಿಸಿದರು.
ವಾಲ್ಮೀಕಿ ನಿಗಮದ 187 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿ ಕರ್ನಾಟಕ ಮತ್ತು ತೆಲಂಗಾಣ ಚುನಾವಣೆಗೆ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದೇನೆ. ನಾವು ಹಗರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ಹೆದರಿರುವ ಆಡಳಿತ ಪಕ್ಷ ನಮ್ಮ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದೆ. ಸತ್ಯವನ್ನು ಮುಚ್ಚಿಡಲು ಈ ರೀತಿಯ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅಶೋಕ್ ಆರೋಪಿಸಿದರು.
ದಲಿತರ ಹಣ ದುರ್ಬಳಕೆ ಪ್ರಕರಣದ ಕುರಿತು ಸದನದಲ್ಲೂ ಹೋರಾಟ ಮುಂದುವರಿಯಲಿದೆ. ಪರಿಶಿಷ್ಟ ವರ್ಗದ ಹಣ ಸದ್ಬಳಕೆಯಾಗಬೇಕು. ಸಾರ್ವಜನಿಕ ಹೊಣೆಗಾರಿಕೆಯನ್ನು ಕಾಪಾಡುವುದು ನಮ್ಮ ಕರ್ತವ್ಯ. ಸಂವಿಧಾನದ ಮೌಲ್ಯಗಳನ್ನು ಉಳಿಸುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಅಶೋಕ್ ಪ್ರಶ್ನೆ
ಕಾಂಗ್ರೆಸ್ ನಾಯಕರೇ, ನಿಮ್ಮ ನಿಷ್ಠೆ ಯಾರ ಪರ? ಪರಿಶಿಷ್ಟರ ಹಿತಾಸಕ್ತಿಯ ಪರವೋ, ಸಂವಿಧಾನದ ಆಶಯದ ಪರವೋ, ಜನರ ಪರವೋ ಅಥವಾ ನಾಗೇಂದ್ರ ಅವರ ಪರವೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆರ್. ಅಶೋಕ್ ಪ್ರಶ್ನಿಸಿದರು.
ಗಣಿಗಾರಿಕೆ ಸೇರಿದಂತೆ 35ಕ್ಕೂ ಹೆಚ್ಚು ಲೂಟಿ ಮತ್ತು ಕಳ್ಳತನ ಪ್ರಕರಣಗಳಲ್ಲಿ ನಾಗೇಂದ್ರ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.
ಸಚಿವ ಸ್ಥಾನ ಕೇವಲ ಅಧಿಕಾರವಲ್ಲ. ಅದಕ್ಕೆ ಸಾಂವಿಧಾನಿಕ ನೈತಿಕತೆ ಮತ್ತು ಜನರ ವಿಶ್ವಾಸ ಅಗತ್ಯ. ಆದರೆ ಈ ಯಾವುದೇ ಲಕ್ಷಣಗಳು ನಾಗೇಂದ್ರ ಅವರಲ್ಲಿ ಕಾಣುತ್ತಿಲ್ಲ ಎಂದು ಅಶೋಕ್ ಟೀಕಿಸಿದರು.
ಆರೋಪಪಟ್ಟಿಯಲ್ಲಿ ನಾಗೇಂದ್ರ ಹೆಸರು ಇದೆ
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಗೃಹ ಸಚಿವರಾಗಿದ್ದಾಗ ಒಂದು ರೀತಿಯ ಹೇಳಿಕೆ ನೀಡಿದ ಅವರು, ಉಪ ಮುಖ್ಯಮಂತ್ರಿಯಾದ ಬಳಿಕ ಮತ್ತೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಚಿವರ ಆದೇಶದ ಮೇರೆಗೆ ಹಣ ವರ್ಗಾವಣೆ ಮಾಡಿದ್ದಾಗಿ ಮೃತ ಅಧಿಕಾರಿ ಚಂದ್ರಶೇಖರ್ ಅವರ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಪಟ್ಟಿ ದಾಖಲಾಗಿದ್ದು, ರಾಜ್ಯಪಾಲರಿಗೂ ಕಳುಹಿಸಲಾಗಿದೆ. ಆರೋಪಪಟ್ಟಿಯಲ್ಲಿ ನಾಗೇಂದ್ರ ಅವರ ಹೆಸರು ಇಲ್ಲದಿದ್ದರೆ ಸಿಬಿಐ ರಾಜ್ಯಪಾಲರ ಬಳಿ ಅನುಮತಿ ಕೇಳುತ್ತಿರಲಿಲ್ಲ ಎಂದು ಅಶೋಕ್ ಹೇಳಿದರು.
ನಾಗೇಂದ್ರ ಮತ್ತು ನೆಕ್ಕುಂಡಿ ನಾಗರಾಜ್ ಹಣ ವರ್ಗಾವಣೆ ಕುರಿತು ಮಾತನಾಡಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ದಾಖಲೆಗಳಲ್ಲಿದೆ ಎಂದು ಅವರು ಆರೋಪಿಸಿದರು.
ಡಿಕೆಶಿ ನೇತೃತ್ವದ ಸಂಪುಟದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಲೋಕಾಯುಕ್ತ ಹಲವು ಪ್ರಕರಣಗಳಲ್ಲಿ ನಾಗೇಂದ್ರ, ಜನಾರ್ದನ ರೆಡ್ಡಿ ಮತ್ತು ರೇಣುಕಾಚಾರ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ. ಬಿಜೆಪಿಯವರಾದರೆ ಮಾತ್ರ ಅನುಮತಿ ನೀಡುತ್ತಾರೆ ಎಂದು ಅಶೋಕ್ ಆರೋಪಿಸಿದರು.
ಆಗ ಕಳ್ಳ, ಈಗ ದೋಷಮುಕ್ತ ಹೇಗೆ?
ನಿಗಮದ ಹಣವನ್ನು ಸುಮಾರು 600 ಖಾತೆಗಳಿಗೆ ವರ್ಗಾವಣೆ ಮಾಡಿ ಐಷಾರಾಮಿ ಕಾರು ಮತ್ತು ಚಿನ್ನ ಖರೀದಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಅವರ ಸಂಬಂಧಿಕರು, ಆಪ್ತರು ಹಾಗೂ ಫಾರ್ಮ್‌ಹೌಸ್ ಮಾಲೀಕರಿಗೆ ಹಣ ಹೋಗಿರುವ ಬಗ್ಗೆ ದಾಖಲೆಗಳಿವೆ ಎಂದು ಅಶೋಕ್ ಹೇಳಿದರು. ಅಧಿಕಾರಿಗಳಿಗೂ ಹಣದ ಪಾಲು ಹೋಗಿದೆ. ಈ ಎಲ್ಲ ದಾಖಲೆಗಳನ್ನು ಸದನದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
187 ಕೋಟಿ ರೂ. ಅಲ್ಲ, ಕೇವಲ 89 ಕೋಟಿ ರೂ. ಹಣ ದುರ್ಬಳಕೆಯಾಗಿದೆ ಎಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾಗಿ ಉಲ್ಲೇಖಿಸಿದ ಅಶೋಕ್, “ಸಿದ್ದರಾಮಯ್ಯ ಇದ್ದಾಗ ನಾಗೇಂದ್ರ ಕಳ್ಳ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದಾಗ ಹೇಗೆ ದೋಷಮುಕ್ತರಾಗುತ್ತಾರೆ?” ಎಂದು ಪ್ರಶ್ನಿಸಿದರು.
ನಾಗೇಂದ್ರ ಬಂಧನದ ಬಳಿಕ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ತಪ್ಪು ಮಾಡದೇ ಇದ್ದಿದ್ದರೆ ಆಸ್ತಿಗಳನ್ನು ಯಾಕೆ ವಶಕ್ಕೆ ಪಡೆಯುತ್ತಿದ್ದರು ಎಂದು ಪ್ರಶ್ನಿಸಿದರು. ನಾಗೇಂದ್ರ ಹಾಗೂ ಅವರ ಆಪ್ತ ನೆಕ್ಕುಂಡಿ ನಾಗರಾಜ್ ಮೊಬೈಲ್‌ನಲ್ಲಿ ಮಾತನಾಡಿರುವುದು ಕೂಡ ದಾಖಲಾಗಿದೆ. ಎಸ್‌ಐಟಿ ವರದಿಯಲ್ಲೂ ನಾಗೇಂದ್ರ ಅವರ ಹೆಸರು ಇದೆ ಎಂದು ಅಶೋಕ್ ಹೇಳಿದರು.
ನಾಗೇಂದ್ರ ಮಾತ್ರ ದಲಿತರಲ್ಲ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದಲಿತರ 42 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ ಎಂದು ಅಶೋಕ್ ಆರೋಪಿಸಿದರು.
ಈಗ ದಲಿತರ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಹಣ ದುರ್ಬಳಕೆಯಾಗಿದೆ. ನಾವು ದಲಿತರನ್ನು ಗುರಿಯಾಗಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ನಾಗೇಂದ್ರ ಮಾತ್ರ ದಲಿತರಲ್ಲ. ಮಹದೇವಪ್ಪ, ತುಕಾರಾಂ ಅವರ ಪತ್ನಿ ಅನ್ನಪೂರ್ಣ ಹಾಗೂ ಕಂಪ್ಲಿ ಗಣೇಶ್ ಕೂಡ ದಲಿತರೇ. ದಲಿತರ ಹಣ ದುರ್ಬಳಕೆ ಮಾಡುವಾಗ ನಾಗೇಂದ್ರ ಅವರಿಗೆ ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಅಶೋಕ್ ಟೀಕಿಸಿದರು.
ರಾಜಭವನದ ಬಾಗಿಲು ತಟ್ಟುತ್ತೇವೆ
ನಮ್ಮ ಹೋರಾಟ ಸದನದ ಒಳಗೆ ಮತ್ತು ಹೊರಗೆ ನಿರಂತರವಾಗಿ ನಡೆಯಲಿದೆ. ಅಂತಿಮವಾಗಿ ರಾಜ್ಯಪಾಲರ ಬಳಿಗೂ ಹೋಗುತ್ತೇವೆ. ಅಗತ್ಯಬಿದ್ದರೆ ರಾಜಭವನದ ಬಾಗಿಲು ತಟ್ಟುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೀತಿಯ ಪ್ರತಿಭಟನೆಗಳ ಬಗ್ಗೆಯೂ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಶೋಕ್ ಹೇಳಿದರು.
ಹೋರಾಟದ ಬೆಂಕಿ ಈಗಾಗಲೇ ಜ್ವಾಲೆಯಾಗಿದೆ. ನಾಗೇಂದ್ರ ಪರ ಯಾರೂ ಮಾತನಾಡುತ್ತಿಲ್ಲ. ನಾಗೇಂದ್ರ ಅವರ ರಾಜೀನಾಮೆ ಪಡೆದು ನೈಸ್ ಮತ್ತು ಬಿಡದಿ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲು ಕಾಂಗ್ರೆಸ್‌ಗೆ ಒಳ್ಳೆಯ ಬುದ್ಧಿಯನ್ನು ದೇವರು ನೀಡಲಿ ಎಂಬ ಆಶಾಭಾವನೆ ಇದೆ. ನಮಗೂ ಅಧಿವೇಶನ ಸುಗಮವಾಗಿ ನಡೆಯಬೇಕು ಎಂಬ ಜವಾಬ್ದಾರಿ ಇದೆ ಎಂದು ಆರ್. ಅಶೋಕ್ ಹೇಳಿದರು.
Laxmi News 24×7