Breaking News

ನಕಲಿ ಔಷಧ ಜಾಲದ ಕಿಂಗ್‌ಪಿನ್‌ ವಿದೇಶದಲ್ಲಿ ಲಾಕ್!

Spread the love

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಕಲಿ ಹಾಗೂ ಕಳಪೆ ಔಷಧ ಮಾರಾಟ ಜಾಲಕ್ಕೆ ಅಂತಾರಾಷ್ಟ್ರೀಯ ನಂಟು ಇರುವುದು ಬಯಲಾಗಿದ್ದು, ಪ್ರಕರಣದ ಪ್ರಮುಖ ರೂವಾರಿ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್  ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಪಶ್ಚಿಮ ಏಷ್ಯಾದ ದೇಶದಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಔಷಧಗಳು ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಪ್ರಶಾಂತ್ ತನ್ನ ಇಬ್ಬರು ಸಹಚರರ ಮೂಲಕ ಸ್ಕೆಚ್ ಹಾಕಿದ್ದ.

ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಔಷಧ ಸಾಗಣೆಯನ್ನು ಕಂಡು ಅನುಮಾನಗೊಂಡ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ. ವಿಚಾರಣೆ ವೇಳೆ ಸಹಚರರು ಕಿಂಗ್‌ಪಿನ್ ಪ್ರಶಾಂತ್ ಹೆಸರನ್ನು ಬಾಯಿಬಿಟ್ಟಿದ್ದು, ಅಧಿಕಾರಿಗಳು ತಕ್ಷಣವೇ ಆತನನ್ನೂ ವಶಕ್ಕೆ ಪಡೆದಿದ್ದಾರೆ. ಈ ಮಹತ್ವದ ಸಂಗತಿಯನ್ನು ಪ್ರಶಾಂತ್ ಪತ್ನಿ ಪೊಲೀಸರ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯಾದಲ್ಲಿದ್ದ ಫಾರ್ಮ್‌ಹೌಸ್ ಮೇಲೆ ತಾವರೆಕೆರೆ ಠಾಣೆ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಔಷಧ ಮರುಪ್ಯಾಕಿಂಗ್ ಘಟಕ ಬಯಲಿಗೆ ಬಂದಿತ್ತು. ಚೆನ್ನೈ, ಹರ್ಯಾಣ, ಚಂಡೀಗಢ ಹಾಗೂ ವಿದೇಶಗಳಿಂದ ಕಡಿಮೆ ಬೆಲೆಗೆ ತರುತ್ತಿದ್ದ ಔಷಧಗಳಿಗೆ ಇಲ್ಲಿ ಪ್ರತಿಷ್ಠಿತ ಕಂಪನಿಗಳ ನಕಲಿ ಲೇಬಲ್ ಹಾಗೂ ದುಬಾರಿ ಬೆಲೆಯ ದರಪಟ್ಟಿ ಅಂಟಿಸಿ, ಮಾರುಕಟ್ಟೆಯಲ್ಲಿ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಪೊಲೀಸರು ಈ ಅಡ್ಡೆಯ ಮೇಲೆ ದಾಳಿ ನಡೆಸುವ ಮುನ್ನವೇ ಆಗಸ್ಟ್ 8 ರಂದೇ ಪ್ರಶಾಂತ್ ವಿದೇಶಕ್ಕೆ ಹಾರಿದ್ದ.

ಬೆಂಗಳೂರಿನ ಅಡ್ಡೆ ಮೇಲೆ ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ, ಪ್ರಶಾಂತ್ ತನ್ನ ವ್ಯವಹಾರಿಕ ಪಾಲುದಾರ ವೆಂಕಟೇಶ್‌ನನ್ನು ವಿದೇಶಕ್ಕೆ ಕರೆಸಿಕೊಳ್ಳಲು ಏರ್‌ಟಿಕೆಟ್ ಬುಕ್ ಮಾಡಿದ್ದ. ಆದರೆ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು, ವೆಂಕಟೇಶ್ ಏರ್‌ಪೋರ್ಟ್ ತಲುಪುವ ಮುನ್ನವೇ ಹೆಬ್ಬಾಳ ಸಮೀಪ ಆತನನ್ನು ಹೆಡೆಮುರಿ ಕಟ್ಟಿದ್ದಾರೆ.

ಅಜರ್‌ಬೈಜಾನ್‌ನಲ್ಲಿ ಪ್ರಶಾಂತ್ ವಶದಲ್ಲಿರುವ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಆತನನ್ನು ಭಾರತಕ್ಕೆ ಕರೆತರಲು ವಿಶೇಷ ತನಿಖಾ ತಂಡ (SIT) ಇಂಟರ್‌ಪೋಲ್ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ.


Spread the love

About Laxminews 24x7

Check Also

2027ರ ಜನವರಿ ಅಂತ್ಯಕ್ಕೆ ವಿಮಾನಯಾನ – ಕೊನೆ ಹಂತದತ್ತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ

Spread the loveವಿಜಯಪುರ: ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ವರ್ಷಾರಂಭವಾಗುತ್ತಿದ್ದಂತೆಯೇ ವಿಮಾನ ಹಾರಿಸುವ ಪ್ರಯತ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ