Breaking News

500 ಕೆಪಿಎಸ್‌ ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ನೆರವು – ಎಡಿಬಿ ಜೊತೆ ಒಪ್ಪಂದಕ್ಕೆ ಸಿಎಂ ಡಿಕೆಶಿ ಸಹಿ

Spread the love

ಬೆಂಗಳೂರು: ಕರ್ನಾಟಕದ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ ಸಹಯೋಗದೊಂದಿಗೆ 1,750 ಕೋಟಿ ರೂ. ಮೊತ್ತದ ಮಹತ್ವಾಕಾಂಕ್ಷಿ ಯೋಜನೆಯ ಒಪ್ಪಂದಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಅವರು ವಿಧಾನಸೌಧದಲ್ಲಿ ಶುಕ್ರವಾರ ಸಹಿ ಹಾಕಿದರು.

ಈ ವೇಳೆ ಡಿಸಿಎಂ ಡಾ. ಜಿ. ಪರಮೇಶ್ವರ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಎಡಿಬಿ ಉಪ ಕಾರ್ಯದರ್ಶಿ ಸೌರಭ್ ಸಿಂಗ್, ಎಡಿಬಿ ರಾಷ್ಟ್ರೀಯ ನಿರ್ದೇಶಕಿ ಮಿಯೋ ಓಕಾ, ಪ್ರಧಾನ ಪೋರ್ಟ್‌ಫೋಲಿಯೊ ನಿರ್ವಹಣಾ ತಜ್ಞ ಕೈ ವೇಯ್ ಯಿಯೋ, ಪ್ರಧಾನ ಯೋಜನಾ ಅಧಿಕಾರಿ (ಶಿಕ್ಷಣ) ಪೂನಂ ಎಸ್. ಭಾಂಬ್ರಿ, ಪ್ರಧಾನ ಸಂವಹನ ಅಧಿಕಾರಿ ರಾಜೇಶ್ ಕುಮಾರ್ ಡಿಯೋಲ್, ಕಾರ್ಯನಿರ್ವಾಹಕ ಸಹಾಯಕಿ ಪೂರ್ಣಿಮಾ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಯೋಜನೆಯಡಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ 1,750 ಕೋಟಿ ರೂ. ನೆರವು ನೀಡಲಿದ್ದು, ಕರ್ನಾಟಕ ಸರ್ಕಾರ 750 ಕೋಟಿ ರೂ. ಭರಿಸಲಿದೆ. ಒಟ್ಟು 2,500 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. 2026 ರಿಂದ 2030ರ ವರೆಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಪ್ರತಿ KPS ಶಾಲೆಯಲ್ಲಿ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ.

ಇದು ಕೇವಲ ಶಾಲೆಗಳ ಅಭಿವೃದ್ಧಿಯ ಯೋಜನೆಯಲ್ಲ; ಮುಂದಿನ 50 ವರ್ಷಗಳ ಕರ್ನಾಟಕದ ಭವಿಷ್ಯ ನಿರ್ಮಿಸುವ ಯೋಜನೆ ಇದಾಗಿದೆ.

KPS ಶಾಲೆಗಳ ಅಭಿವೃದ್ಧಿಗೆ ‘ಎಂಟು ಗ್ಯಾರಂಟಿ’
KPS ಶಾಲೆಗಳಲ್ಲಿ LKGಯಿಂದ 12ನೇ ತರಗತಿವರೆಗೆ ಒಂದೇ ಆವರಣದಲ್ಲಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿ ಹೊಂದಲಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ, ದ್ವಿಭಾಷಾ ಬೋಧನೆ, ಕಂಪ್ಯೂಟರ್ ಹಾಗೂ ಕೃತಕ ಬುದ್ಧಿಮತ್ತೆ (AI) ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ಮಾರ್ಗದರ್ಶನಕ್ಕೆ ಆದ್ಯತೆ, ಸಂಗೀತ, ಸಾಹಿತ್ಯ ಮತ್ತು ಕ್ರೀಡೆಯಲ್ಲಿ ಪ್ರತಿಭೆ ಬೆಳೆಸುವುದು, ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಹಾಗೂ ವಿದ್ಯಾರ್ಥಿಗಳ ನಿರಂತರ ಪ್ರಗತಿಯ ಮೇಲ್ವಿಚಾರಣೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸುವ ಮೂಲಕ ಶಾಲೆ–ಪೋಷಕರ ಸಂಪರ್ಕವನ್ನು ಬಲಪಡಿಸಲಾಗುತ್ತದೆ. 6ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಹಾಗೂ ವೃತ್ತಿಪರ ಮಾರ್ಗದರ್ಶನ ನೀಡಲು ಯೋಜಿಸಲಾಗಿದೆ. ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ವಿಶೇಷ ಕಾರ್ಯಯೋಜನೆ ರೂಪಿಸುವುದರ ಜೊತೆಗೆ, 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ನೀಡಲಾಗುತ್ತದೆ.

ಗ್ರಾಮೀಣ ಮಕ್ಕಳಿಗೆ ಜಾಗತಿಕ ಅವಕಾಶ
21ನೇ ಶತಮಾನದ ಕೌಶಲ್ಯಗಳನ್ನು ಶಿಕ್ಷಣದ ಭಾಗವನ್ನಾಗಿ ಮಾಡಿ, ಗ್ರಾಮೀಣ ಭಾಗದ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದುವಂತೆ ರೂಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಡಿಜಿಟಲ್ ಕಲಿಕೆ, ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ ಹಾಗೂ ಉತ್ತಮ ಶೈಕ್ಷಣಿಕ ಫಲಿತಾಂಶಗಳಿಗೆ ಒತ್ತು ನೀಡಲಾಗುತ್ತದೆ.


Spread the love

About Laxminews 24x7

Check Also

28 ಜೀವಾವಧಿ ಶಿಕ್ಷಾ ಬಂಧಿಗಳ ಅವಧಿ ಪೂರ್ವ ಬಿಡುಗಡೆಗೆ ಸಂಪುಟ ಅಸ್ತು

Spread the loveಬೆಂಗಳೂರು: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ  ಅನುಭವಿಸುತ್ತಿರುವ ಸನ್ನಡತೆ ಹೊಂದಿರುವ ಅರ್ಹ ಬಂಧಿಗಳ ಪೈಕಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ