Breaking News

ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಎಚ್ಚರಿಕೆ!

Spread the love

ಬೆಳಗಾವಿ  :ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಕೈಗೊಳ್ಳಲು ಹಿಂದೇಟು ಹಾಕಿದರೆ ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್‌ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆಯ ಆಡಳಿತವು  ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆ ವಿಷಯದಲ್ಲಿ ಬದ್ಧರಾಗಿರಬೇಕು.  ಪಾಲಿಕೆಯಲ್ಲಿ ಕನ್ನಡ ಪರ ನಿರ್ಣಯ ಕೈಗೊಳ್ಳಲು ಕಾನೂನು ತೊಡಕು ಇಲ್ಲ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಮತ್ತೆ ಕಾನೂನು ಸಲಹೆ ಪಡೆಯುವ ಅವಶ್ಯಕತೆ ಇಲ್ಲ.
ಕನ್ನಡ ಪರ ನಿರ್ಣಯ ಕೈಗೊಳ್ಳಲು ಏಕೆ ಮೀನಾಮೇಷ ಮಾಡುತ್ತಿದೆ ಎಂಬುದು ಗೊತ್ತಿಲ್ಲ. ಪಾಲಿಕೆ ಆಡಳಿತರೂಢ ಬಿಜೆಪಿ ಕೂಡಲೇ ವಿಶೇಷ ಸಭೆ ಕರೆದು ಗೊತ್ತುವಳಿ ಮಂಡಿಸಬೇಕು. ಇಲ್ಲದಿದ್ದರೆ ಪಾಲಿಕೆ ಸೂಪರ್ ಸೀಡ್ ಮಾಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದರು.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡ ಅಶೋಕ ಚಂದರಗಿ ಮಾತನಾಡಿ, ಪಾಲಿಕೆಯಲ್ಲಿ  ಕನ್ನಡ ಪರ ಗೊತ್ತುವಳಿ ಕೈಗೊಳ್ಳುವಂತೆ ನಾಲ್ಕು ತಿಂಗಳಿನಿಂದ ನಿರಂತರ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವ ನೆಪಯಿಟ್ಟುಕೊಂಡು ನಿರ್ಣಯ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದ ಪ್ರಕರಣಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಗಡಿಭಾಗದ ಪ್ರದೇಶಗಳು ಕರ್ನಾಟಕದ್ದು ಖಚಿತ ಪಡಿಸಲು, ಪ್ರಬಲ ಸಾಕ್ಷಿ ಸಲ್ಲಿಕೆ ಮಾಡುವ ಉದ್ದೇಶದಿಂದ ಬೆಳಗಾವಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಪರ ನಿಲುವು ತೆಗೆದುಕೊಳ್ಳುವಂತೆ ಕನ್ನಡ ಪರ ಸಂಘಟನೆಗಳು, ಹೋರಾಟಗಾರರ ಆಗ್ರಹ. ಆದರೆ, ಮರಾಠಿ ಭಾಷಿಕರ ವೋಟ್ ಬ್ಯಾಂಕ್ ಎಂಬ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ನಿರ್ಣಯ ಕೈಗೊಳ್ಳಲು ಮೀನಾಮೇಷ ಮಾಡುತ್ತಿದ್ದಾರೆ. ಹೀಗಾಗಿ ಕನ್ನಡ ಪರ ನಿರ್ಣಯ ಕೈಗೊಳ್ಳುವವರೆಗೆ ಪಾಲಿಕೆಗೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು.
ಶ್ರೀನಿವಾಸ ತಾಳುಕರ್, ಮಹಾದೇವ ತಳವಾರ, ಲಕ್ಷ್ಮಣರಾವ ಚಿಂಗಳೆ ಇತರರಿದ್ದರು.

Spread the love

About Laxminews 24x7

Check Also

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಜನ; ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ

Spread the loveಗದಗ: ಮೂಲ ಸೌಲಭ್ಯಗಳ ಕೊರತೆಯಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಎದುರೇ ಚರಂಡಿಯ ಕಸ ಸುರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ