ಗಾಂಧಿನಗರ: ಭಾರತದ 3ನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾದ 1 TB (ಟೆರಾಬೈಟ್) (1,000 GB) ಮಾಹಿತಿಗಳು ಡೇಟಾ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಬ್ಯಾಂಕ್ ಆಫ್ ಬರೋಡಾದ ಸಿಸ್ಟಮ್ ಹ್ಯಾಕ್ ಆಗಿ, ಲಕ್ಷಾಂತರ ಗ್ರಾಹಕರ ಸೂಕ್ಷ್ಮ ದಾಖಲೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜು.25 ರಂದು ಡಾರ್ಕ್ ವೆಬ್ ಅನ್ನು ಟ್ರ್ಯಾಕ್ ಮಾಡುವ Ransomware.live ಎಂಬ ಜಾಲತಾಣದಲ್ಲಿ ಈ ಮಾಹಿತಿ ಮೊದಲು ಪತ್ತೆಯಾಗಿತ್ತು.
ಟ್ರಿಪಲ್ ಎಕ್ಸ್ ಎಂಬ ಹ್ಯಾಕರ್ಸ್ ಗುಂಪು ಈ ಸೈಬರ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಗುಂಪು ಇತ್ತೀಚೆಗಷ್ಟೇ ಇಂಡೋನೇಷ್ಯಾದ ಸರ್ಕಾರಿ ಬ್ಯಾಂಕ್ ಒಂದರ ಡೇಟಾವನ್ನು ಕೂಡ ಇದೇ ರೀತಿ ಕದ್ದಿತ್ತು. ಆರಂಭಿಕ ವರದಿಗಳ ಪ್ರಕಾರ, ಬ್ಯಾಂಕಿನ ಇಮೇಲ್ ವ್ಯವಸ್ಥೆಯಲ್ಲಾದ ಲೋಪದಿಂದಾಗಿಯೇ ಹ್ಯಾಕರ್‌ಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ಯಾಂಕ್ ಫೋರೆನ್ಸಿಕ್ ಆಡಿಟ್ ಮೂಲಕ ತನಿಖೆ ನಡೆಸುತ್ತಿದೆ.
ಹ್ಯಾಕರ್‌ಗಳು ಸುಮಾರು 1,000 GB ಡೇಟಾವನ್ನು ಇಂಟರ್ನೆಟ್‌ನಲ್ಲಿ ಉಚಿತವಾಗಿ ಹಾಗೂ ಹರಾಜಿನ ಮೂಲಕ ಲೀಕ್ ಮಾಡಿದ್ದಾರೆ. ಇದರಲ್ಲಿ ಬ್ಯಾಂಕ್ ಖಾತೆ ತೆರೆಯುವಾಗ ಗ್ರಾಹಕರು ಸಲ್ಲಿಸಿದ 1 ಲಕ್ಷದಿಂದ 3 ಲಕ್ಷದಷ್ಟು ಕಸ್ಟಮರ್ ಅಪ್ಲಿಕೇಶನ್ ಫಾರ್ಮ್‌ಗಳು, ಅವರ ಫೋಟೋಗಳು ಮತ್ತು ಗುರುತಿನ ಚೀಟಿಗಳಿವೆ ಎನ್ನಲಾಗಿದೆ.
ಸೋರಿಕೆಯಾಗಿರುವ ಮುಖ್ಯ ದಾಖಲೆಗಳು
ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆಗಳು ಮತ್ತು ಆಧಾರ್ ಕಾರ್ಡ್ ವಿವರಗಳು, ಸೇವಿಂಗ್ಸ್ ಮತ್ತು ಕರೆಂಟ್ ಖಾತೆಗಳ ಬ್ಯಾಲೆನ್ಸ್ ವಿವರಗಳು, ನೆಟ್ ಬ್ಯಾಂಕಿಂಗ್ ಬಳಕೆದಾರರ ಐಡಿಗಳು ಸೋರಿಕೆಯಾಗಿದೆ.
ಗ್ರಾಹಕರು ಲೋನ್ ಪಡೆಯಲು ಸಲ್ಲಿಸಿದ ಆಸ್ತಿ ಪತ್ರಗಳು ಮತ್ತು ಸಾಲ ಮೌಲ್ಯಮಾಪನ ದಾಖಲೆಗಳು ಇದರಲ್ಲಿ ಸೇರಿವೆ. ಅಷ್ಟೇ ಅಲ್ಲದೇ ಬ್ಯಾಂಕಿನ ರಹಸ್ಯ ವರದಿಗಳಾದ ಬ್ಯಾಂಕ್ ಶಾಖೆಗಳ ಆಡಿಟ್ ವರದಿಗಳು, ಆಂತರಿಕ ಇಮೇಲ್ ಸಂವಹನಗಳು, ವಿಜಿಲೆನ್ಸ್ ತನಿಖಾ ವರದಿಗಳು ಮತ್ತು ‘bob World’ ಮೊಬೈಲ್ ಆಪ್‌ನ ಆಡಿಟ್ ರಿಪೋರ್ಟ್‌ಗಳು ಸೋರಿಕೆಯಾಗಿವೆ ಎನ್ನಲಾಗಿದೆ.
Laxmi News 24×7