Breaking News

ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಅನುಷ್ಠಾನ ಜಿಲ್ಲಾ ಕೋಶದ ಸಭೆ

Spread the love

ಬೆಳಗಾವಿ: ಸಮುದಾಯ ಮತ್ತು ಕಾಪೋರೇಟ್ ಸಾಮಾಜಿಕ ಜವಾಬ್ದಾರಿಯೊಂದಿಗೆ ಉತ್ತಮ ಕಲಿಕೆ-ಉಜ್ವಲ ಭವಿಷ್ಯ ಘೋಷಣೆಯಡಿ ಕೆ.ಪಿ.ಎಸ್. ಶಾಲೆಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಮುಂದಾಗಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆಪಿಎಸ್) ಅಭಿವೃದ್ಧಿ ಪಡಿಸಲು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ (ಜು.23) ಜರುಗಿದ ಸಮುದಾಯ ಮತ್ತು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಸಿ.ಎಸ್.ಆರ್) ಅನುಷ್ಠಾನ ಜಿಲ್ಲಾ ಕೋಶದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಎಲ್.ಕೆ.ಜಿ.ಯಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಿ.ಸಿ.ಎಸ್.ಆರ್ ನಿಧಿಯ ಸಮರ್ಪಕ ಬಳಕೆಗಾಗಿ ಜಿಲ್ಲಾ ಮಟ್ಟದಲ್ಲಿ ಸಿ.ಸಿ.ಎಸ್.ಆರ್ ಕೋಶವನ್ನು ರಚಿಸಲಾಗಿದೆ. ಸಿ.ಎಸ್.ಆರ್ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಉದ್ಯಮಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಬೆಳಗಾವಿ ಶೈಕ್ಷಣಿಕ ವಿಭಾಗದಲ್ಲಿ 91 ಸರ್ಕಾರಿ ಶಾಲೆಗಳು ಹಾಗೂ ಚಿಕ್ಕೋಡಿ ಶೈಕ್ಷಣಿಕ ವಿಭಾಗದಲ್ಲಿ 84 ಸರ್ಕಾರಿ ಶಾಲೆಗಳು ಸೇರಿ ಒಟ್ಟು 175 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತಿಸಲು ಈಗಾಗಲೇ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ಸದರಿ ಶಾಲೆಗಳ ಅಭಿವೃದ್ಧಿಗೆ ಬೆಳಗಾವಿ ವಿಭಾಗದಲ್ಲಿ 24 ಉದ್ಯಮ ಸಂಸ್ಥೆಗಳು ಹಾಗೂ ಚಿಕ್ಕೋಡಿ ವಿಭಾಗದಲ್ಲಿ 25 ಉದ್ಯಮ ಸಂಸ್ಥೆಗಳನ್ನು ಸಿ.ಎಸ್.ಆರ್ ನಿಧಿಯ ಬಳಕೆಗೆ ಗುರುತಿಸಲಾಗಿದೆ.

ಸಿ.ಎಸ್.ಆರ್ ನಿಧಿಯನ್ನು ಶಾಲಾ ಕಟ್ಟಡ ಸ್ಮಾರ್ಟ ತರಗತಿಗಳು, ಕಂಪ್ಯೂಟರ್ ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಹೈಟೆಕ್ ಶೌಚಾಲಯ, ಸಾರಿಗೆ ವ್ಯವಸ್ಥೆ, ಅತಿಥಿ ಶಿಕ್ಷಕರ ವೇತನ ಸೇರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಸುಧಾರಣೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಸರಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಕೆ.ಪಿ.ಎಸ್. ಶಾಲೆಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಎರಡು ವಿಭಾಗದಲ್ಲಿ ಉತ್ತಮ ಫಲಿತಾಂಶ ಮೂಡಿ ಬಂದಿದೆ. ಸಿ.ಎಸ್.ಆರ್ ನಿಧಿಯ ಮೂಲಕ ಶಾಲೆ ಹಾಗೂ ಮಕ್ಕಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದರಿಂದ ಮತ್ತಷ್ಟು ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಉದ್ಯಮ ಸಂಸ್ಥೆಗಳು ನಮ್ಮ ಶಾಲೆ-ನನ್ನ ಕೊಡುಗೆ ಪೋರ್ಟಲ್ನಲ್ಲಿ (http://nsnk.karnataka.gov.in) ನೊಂದಣಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಿ.ಎಸ್.ಆರ್ ಕೋಶವನ್ನು ಅಥವಾ ಸಂಬಂಧಪಟ್ಟ ವಿಭಾಗಗಳ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ ವಿಭಾಗದ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಚಿಕ್ಕೋಡಿ ವಿಭಾಗದ ಉಪನಿರ್ದೇಶಕ ಆರ್.ಎಸ್.ಸೀತಾರಾಮು, ಲೀಡ್ ಬ್ಯಾಂಕ ವ್ಯವಸ್ಥಾಪಕರಾದ ಪ್ರಶಾಂತ ಘೋಡಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಉದ್ಯಮಿಗಳು ಹಾಗೂ ವಿವಿಧ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.


Spread the love

About Laxminews 24x7

Check Also

ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ: ಎಂ.ಬಿ ಪಾಟೀಲ್

Spread the loveಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ