Breaking News

ಕೊನೆಗೂ ಮಣಿದ ಕೇಂದ್ರ ಸರ್ಕಾರ: ಸೂಪ್​ ಸೇವಿಸಿ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಮ್ ವಾಂಗ್ಚುಕ್!

Spread the love

ನವದೆಹಲಿ: ಕಳೆದ 26 ದಿನಗಳಿಂದ ನಡೆಸುತ್ತಿದ್ದ ನಿರಂತರ ಹೋರಾಟಕ್ಕೆ ಪರಿಸರವಾದಿ ಹಾಗೂ ಹೋರಾಟಗಾರ ಸೋನಮ್​ ವಾಂಗ್ವುಕ್​ ತೆರೆಎಳೆದಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ನೀಡಿದ ಸ್ಪಷ್ಟ ಭರವಸೆಯ ಬೆನ್ನಲ್ಲೇ, ವಾಂಗ್ಚುಕ್ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಅವರಿಗೆ ಸೂಪ್​ ಕುಡಿಸುವ ಮೂಲಕ ಉಪವಾಸ ಹಿಂಪಡೆಯಲು ನೆರವಾದರೆ, ಅವರ ಧರ್ಮಪತ್ನಿ ಗೀತಾಂಜಲಿ ಆಂಗ್ಮೊ ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಹಾಗೂ ಲಡಾಖ್‌ನ ‘ಅಪೆಕ್ಸ್ ಬಾಡಿ’ಯ ಹಿರಿಯ ನಾಯಕರ ಸಮ್ಮುಖದಲ್ಲಿ ತಾವು 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿರುವುದಾಗಿ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ತಡರಾತ್ರಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ.
ದೇಶಾದ್ಯಂತ ಸಂಭವಿಸಬಹುದಾದ ಹಿಂಸಾಚಾರವನ್ನು ತಡೆಯುವ ಉದ್ದೇಶ ಹಾಗೂ ವಿವಿಧ ಷರತ್ತುಗಳ ಕುರಿತು ನಡೆದ ದೀರ್ಘ ಮಾತುಕತೆಯ ನಂತರವೇ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಸೋನಮ್ ವಾಂಗ್ಚುಕ್, ತಾವೇಕೆ ಉಪವಾಸ ಸತ್ಯಾಗ್ರಹ ಹಿಂಪಡೆದೆ ಎಂಬ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ವಿಡಿಯೋ ಮೂಲಕ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ, ಸಾರ್ವಜನಿಕರು ಸದಾ ಜಾಗರೂಕರಾಗಿರಬೇಕು ಮತ್ತು ಎಲ್ಲೂ ಯಾವುದೇ ರೀತಿಯ ಹಿಂಸಾಚಾರಕ್ಕೆ ಆಸ್ಪದ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ವೈದ್ಯರ ಸಲಹೆಗಳನ್ನು ಸರಿಯಾಗಿ ಪಾಲಿಸಿ, ಶೀಘ್ರದಲ್ಲೇ ತಮ್ಮ ಹಳೆಯ ಆರೋಗ್ಯ ಹಾಗೂ ತೂಕವನ್ನು ಮರಳಿ ಪಡೆಯುವಂತೆ ಸೋನಮ್ ವಾಂಗ್ಚುಕ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ವಾಂಗ್ಚುಕ್ ಅವರು ವೈದ್ಯರ ಸೂಚನೆಗಳನ್ನು ಅನುಸರಿಸಿ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ಹೇಳಿದ್ದೇನು?
ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಕ್ಕೆ ‘ಕಾಕ್ರೋಚ್ ಜನತಾ ಪಾರ್ಟಿ’ಯ ಸಂಸ್ಥಾಪಕ ಅಭೀಜಿತ್ ದೀಪ್ಕೆ ಸಂತಸ ಹಾಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಧೈರ್ಯ ಮತ್ತು ತ್ಯಾಗಕ್ಕೆ ಧನ್ಯವಾದಗಳು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನೀವು ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಜಾಗೃತಗೊಳಿಸಿದ್ದೀರಿ. ಈ ದೇಶಕ್ಕೆ ನಿಮ್ಮ ಜೀವ ಅತ್ಯಂತ ಅಮೂಲ್ಯವಾದದ್ದು ಎಂದು ಹೇಳಿದ್ದಾರೆ. ಆದರೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಸಿಜೆಪಿ ತನ್ನ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸಚಿವ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಕೈ ಹಿಡಿದುಕೊಂಡು ಮಾತನಾಡಿದ ಸೋನಮ್ ವಾಂಗ್ಚುಕ್, ನನ್ನ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿರುವುದಕ್ಕೆ ನನಗೆ ಅತ್ಯಂತ ಸಂತೋಷ ಮತ್ತು ಕೃತಜ್ಞತೆಯೆನಿಸುತ್ತಿದೆ ಎಂದರು. ನಂತರ ತಮ್ಮ ಪತ್ನಿಯತ್ತ ತಿರುಗಿ, ಗೀತಾಂಜಲಿ ಸದಾ ನನ್ನ ಜೊತೆಗಿದ್ದಾಳೆ, ಆಕೆಗೆ ಧನ್ಯವಾದ ಹೇಳುವ ಬದಲು ನನ್ನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಹಂಚಿಕೊಂಡರು. ಇದೇ ವೇಳೆ ಸಚಿವ ನಡ್ಡಾ ಅವರು ಸರ್ಕಾರದ ಅಭಯದ ಪತ್ರವನ್ನು ಓದುತ್ತಾ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದವರ ವಿರುದ್ಧ ಹಾಗೂ ಜುಲೈ 20, 2026 ರಂದು ಸಂಸತ್ ಚಲೋ ನಡೆಸಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದರು. ಜೊತೆಗೆ, ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣೆಗಳು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಇತ್ತೀಚಿನ ನೀಟ್  ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು.
ಇನ್ನು ಈ ಎಲ್ಲ ಬೆಳವಣಿಗೆಗಳ ನಡುವೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಶಿಕ್ಷಣ ಕಾರ್ಯದರ್ಶಿಯವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ‘ಫಾಸ್ಟ್ ಟ್ರ್ಯಾಕ್’ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟ ಭರವಸೆ ನೀಡಿದ್ದಾರೆ.
ಅಂದಹಾಗೆ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆಗಾರಿಕೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ಅವರು ಜೂನ್ 28 ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನಾಕಾರರೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಕಳೆದ ಶನಿವಾರ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಉಪವಾಸ ಹಿಂಪಡೆಯಲು ನಿರಾಕರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಅವರ ಪತ್ನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಂತರ, ಕೋರ್ಟ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿತು. ಈ 26 ದಿನಗಳ ನಿರಂತರ ಉಪವಾಸದಿಂದಾಗಿ ಅವರು ಸುಮಾರು 11 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾರೆ.
ವಾಂಗ್ಚುಕ್ ಅವರು ತಮ್ಮ ವಿವಿಧ ಬೇಡಿಕೆಗಳಿಗಾಗಿ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. 2024 ರಲ್ಲಿ ಲಡಾಖ್‌ನ ಸಂಪನ್ಮೂಲಗಳ ರಕ್ಷಣೆಗೆ ಶಾಸನಬದ್ಧ ಹಕ್ಕುಗಳನ್ನು ಆಗ್ರಹಿಸಿ, ಮೈನಸ್ ಡಿಗ್ರಿ ಚಳಿಯಲ್ಲೂ 11,500 ಅಡಿ ಎತ್ತರದಲ್ಲಿ ಕೇವಲ ನೀರು ಮತ್ತು ಉಪ್ಪು ಸೇವಿಸಿ 21 ದಿನಗಳ ಕಾಲ ಬಟಾಬಯಲಿನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು 6ನೇ ಪರಿಚ್ಛೇದದ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ, ಕಳೆದ ವರ್ಷ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಸುಮಾರು ಆರು ತಿಂಗಳು ಬಂಧನದಲ್ಲಿಡಲಾಗಿತ್ತು. ಅಂದಹಾಗೆ, ವಾಂಗ್ಚುಕ್ ಅವರ ಶಿಕ್ಷಣ ತತ್ವ ಮತ್ತು ಜೀವನಶೈಲಿಯೇ ಪ್ರಸಿದ್ಧ ‘3 ಈಡಿಯಟ್ಸ್’ ಸಿನಿಮಾದ ‘ಫುನ್ಸುಖ್ ವಾಂಗ್ಡು’ ಪಾತ್ರಕ್ಕೆ ಮುಖ್ಯ ಪ್ರೇರಣೆಯಾಗಿದೆ ಎಂದು ಹೇಳಲಾಗುತ್ತಿದೆ,

Spread the love

About Laxminews 24x7

Check Also

ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ: ಎಂ.ಬಿ ಪಾಟೀಲ್

Spread the loveಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ