Breaking News

ಅಂಗಾಂಗ ದಾನ: ಬಾಗಲಕೋಟೆ ಟು ಬೆಳಗಾವಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ

Spread the love

ಬೆಳಗಾವಿ: ರೈಲು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಕುಟುಂಬಸ್ಥರು ಅಂಗಾಂಗ ದಾನ ಮುಂದಾಗಿದ್ದು, ಬಾಗಲಕೋಟೆಯಿಂದ  ಬೆಳಗಾವಿಗೆ ರೋಗಿಯನ್ನು ತಲುಪಿಸಲು ಎರಡು ಜಿಲ್ಲೆಯ ಪೊಲೀಸರು ‘ಗ್ರೀನ್ ಕಾರಿಡಾರ್’ ಹಾಗೂ ‘ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಯಕ್ಕೆ ಸರಿಯಾಗಿ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಲು ನೆರವಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜೂನ್ನೂರ ಗ್ರಾಮದ ನಿವಾಸಿ ದುಂಡಪ್ಪ ಕೆಂಚಕನ್ನವರ (55) ಎಂಬುವವರೇ ಅಂಗಾಂಗ ದಾನ ಮಾಡಿದ ಪುಣ್ಯಾತ್ಮ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವ ಅವಸರದಲ್ಲಿ ದುಂಡಪ್ಪ ಅವರು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು.

ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತಕ್ಷಣ ಅವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಿಸದೇ ದುಂಡಪ್ಪ ಅವರು ‘ಮೆದುಳು ನಿಷ್ಕ್ರಿಯ’ ಗೊಂಡಿರುವುದಾಗಿ ವೈದ್ಯರು ಘೋಷಿಸಿದರು.

ಮನೆಯ ಯಜಮಾನ ಇನ್ನು ಮರಳಿ ಬರುವುದಿಲ್ಲ ಎಂಬ ಕಹಿ ಸತ್ಯ ತಿಳಿದು ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದರು. ಆದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಧೈರ್ಯ ತಂದುಕೊಂಡ ಕುಟುಂಬದ ಸದಸ್ಯರು, ದುಂಡಪ್ಪ ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು.

ಅಂಗಾಂಗ ಜೋಡಣೆ ಶಸ್ತ್ರಚಿಕಿತ್ಸೆಗಾಗಿ ರೋಗಿಯನ್ನು ಬಾಗಲಕೋಟೆಯಿಂದ ಬೆಳಗಾವಿಯ ಕೆಎಎಲ್‌ಇ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಬ್ರೆನ್ ಡೆಡ್ ಆಗಿದ್ದ ರೋಗಿಯ ರಕ್ತದ ಒತ್ತಡ ಮತ್ತು ಹೃದಯ ಬಡಿತವನ್ನು ಸಹಜ ಸ್ಥಿತಿಯಲ್ಲಿಟ್ಟುಕೊಂಡೇ ಆಸ್ಪತ್ರೆಗೆ ತಲುಪಿಸುವುದು ವೈದ್ಯರ ಮುಂದಿದ್ದ ದೊಡ್ಡ ಸವಾಲಾಗಿತ್ತು.

ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಎರಡೂ ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಆಂಬ್ಯುಲೆನ್ಸ್ ಚಲಿಸುವ ಮಾರ್ಗದುದ್ದಕ್ಕೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟರು.

ಪರಿಣಾಮವಾಗಿ, ಅತ್ಯಂತ ಕಡಿಮೆ ಅವಧಿಯಲ್ಲಿ ರೋಗಿಯನ್ನು ಸುರಕ್ಷಿತವಾಗಿ ಬೆಳಗಾವಿ ಆಸ್ಪತ್ರೆಗೆ ತಲುಪಿಸಲಾಯಿತು. ಸದ್ಯ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಅಗತ್ಯವಿರುವ ರೋಗಿಗಳಿಗೆ ಅಂಗಾಂಗ ಜೋಡಣೆ ಮಾಡುವ ಪ್ರಕ್ರಿಯೆ ಯಶಸ್ವಿಯಾಗಿ ಸಾಗುತ್ತಿದೆ.


Spread the love

About Laxminews 24x7

Check Also

ಒಂದೇ ದಿನ ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

Spread the loveಚಿತ್ರದುರ್ಗ: ಚಿತ್ರದುರ್ಗದಲ್ಲಿ  ಬೀದಿ ನಾಯಿಗಳ (Stray Dog Attack) ದಾಳಿ ಮತ್ತೆ ಆತಂಕ ಮೂಡಿಸಿದೆ. ನಗರದ ಚೇಳಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ