ಚಿಕ್ಕೋಡಿ: “ರೈತರು ಮತ್ತು ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ. ಅಂತಹ ಪ್ರಸಂಗ ಬಂದರೆ ಮೆಟ್ಟಿನಲ್ಲಿ ಹೊಡೆಯುತ್ತೇನೆ” ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷವಾಗಿ ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ಶನಿವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ವೈಯಕ್ತಿಕ ಟೀಕೆಗಳಿಗೆ ತಿರುಗೇಟು ನೀಡಿ ಮಾತನಾಡುತ್ತಾ, “ಲಕ್ಷ್ಮಣ್ ಸವದಿಯನ್ನು ಟ್ರ್ಯಾಕ್ಟರ್ ಹೊಡೆಯಲು ಕಳಿಸುತ್ತೇವೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಹೌದು, ನಾನೊಬ್ಬ ರೈತನ ಹೊಟ್ಟೆಯಲ್ಲಿ ಹುಟ್ಟಿದ್ದೇನೆ. ಎತ್ತು ಹೊಡೆಯುತ್ತೇನೆ, ಟ್ರ್ಯಾಕ್ಟರ್ ಕೂಡ ಹೊಡೆಯುತ್ತೇನೆ. ಆದರೆ, ಪ್ರಸಂಗ ಬಂದರೆ ಅನ್ಯಾಯ ಮಾಡಲು ಬಂದವನಿಗೆ ಮೆಟ್ಟಿನಿಂದಲೂ ಹೊಡೆಯುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಐಎಎಸ್, ಐಪಿಎಸ್ ಓದಿಲ್ಲ. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿ, ಕಬಡ್ಡಿ ಆಡಿಕೊಂಡು, ದನ ಕಾಯ್ದುಕೊಂಡು ಬೆಳೆದವ. ನನ್ನ ಕ್ಷೇತ್ರದ 1,31,000 ಜನರೇ ನನಗೆ ರಕ್ಷಾಕವಚವಾಗಿ ನಿಂತಿದ್ದಾರೆ. ರೈತರ ಕುಲದಲ್ಲಿ ಹುಟ್ಟಿದ ನನಗೆ ಅವರ ಸ್ವಾಭಿಮಾನ ಮತ್ತು ಬೆಳೆದ ಬೆಳೆಗೆ ಮೋಸವಾಗುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
“ರಾಜ್ಯದಲ್ಲೇ ಅತಿ ಹೆಚ್ಚು, ಅಂದರೆ ವಾರ್ಷಿಕ 76 ಲಕ್ಷ ಟನ್ ಕಬ್ಬು ಬೆಳೆಯುವ ಹೆಮ್ಮೆಯ ತಾಲೂಕು ನಮ್ಮದು. ಅಮ್ಮಾಜೇಶ್ವರಿ-ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡ ಬಳಿಕ ಮುಂದಿನ ಕೇವಲ ಎರಡು ವರ್ಷಗಳಲ್ಲಿ ಇದು 1 ಕೋಟಿ ಟನ್ ಕಬ್ಬು ಬೆಳೆಯುವ ನಾಡಾಗಿ ಹೊರಹೊಮ್ಮಲಿದೆ” ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ರೈತರು ಬೆವರು ಹರಿಸಿ ಬೆಳೆದ ಕಬ್ಬನ್ನು ಕಾರ್ಖಾನೆಗೆ ತಂದಾಗ ನಡೆಯುತ್ತಿರುವ ಮೋಸದ ಬಗ್ಗೆ ಮಾತನಾಡುತ್ತಾ, “ಒಂದು ಟ್ರಿಪ್‌ಗೆ ಎರಡು-ಮೂರು ಟನ್ ತೂಕದ ಕಬ್ಬು ಕದ್ದು ರೈತರ ರಕ್ತ ಹೀರುವವರಿಗೆ ಒಂದು ಎಕರೆ ಕಬ್ಬು ಬೆಳೆಯಲು ರೈತರು ಪಡುವ ಕಷ್ಟವೇನು ಎಂಬುದು ತಿಳಿದಿಲ್ಲ. ಇಂತಹ ಮೋಸದಾಟಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ” ಎಂದು ಕಾರ್ಖಾನೆಗಳು ಹಾಗೂ ದಲ್ಲಾಳಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು.
ಇನ್ನೂ, ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಯ ಕುರಿತು ಇತ್ತೀಚಿಗೆ ಪ್ರತಿಕ್ರಿಯಿಸಿದ್ದ ಸವದಿ, ಕ್ಷೇತ್ರಗಳ ಪುನರ್‌ವಿಂಗಡನೆಯಿಂದ ಜನಪ್ರತಿನಿಧಿಗಳಿಗೆ ಜನಸಂಪರ್ಕ ಸುಲಭವಾಗಲಿದ್ದು, ಅಭಿವೃದ್ಧಿ ದೃಷ್ಟಿಯಿಂದ ಪೂರಕವಾದ ನಿರ್ಧಾರ. ಪ್ರಸ್ತುತ ಲೋಕಸಭಾ ಕ್ಷೇತ್ರಗಳು ಭೌಗೋಳಿಕವಾಗಿ ಅತ್ಯಂತ ದೊಡ್ಡದಾಗಿವೆ. ಇದರಿಂದ ಮತದಾರರನ್ನು ತಲುಪುವುದು ಜನಪ್ರತಿನಿಧಿಗಳಿಗೆ ಸವಾಲಿನ ಕೆಲಸವಾಗಿದೆ ಎಂದು ಹೇಳಿ ಗಮನ ಸೆಳೆದಿದ್ದರು.
Laxmi News 24×7