ಬೆಳಗಾವಿ: ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗೆ ಕುಟುಂಬದಲ್ಲೇ ಟಿಕೆಟ್ಗಾಗಿ ಸ್ಪರ್ಧೆ ಇರುವುದರಿಂದ ಆಯಾ ಕುಟುಂಬದಲ್ಲೇ ಅವಕಾಶ ನೀಡಲಾಗಿದೆ. ಕುಟುಂಬ ರಾಜಕಾರಣ ನಮ್ಮ ಪಕ್ಷದಲ್ಲಿ ಮಾತ್ರವಲ್ಲ, ಎಲ್ಲ ಪಕ್ಷದಲ್ಲೂ, ಪಕ್ಕದ ರಾಜ್ಯದಲ್ಲೂ ಇದೆ. ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ಚುನಾವಣೆಗೆ ನಿಲ್ಲಿಸಬೇಕಾಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.
ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ನಿರೀಕ್ಷೆಯಂತೆ ಅಭ್ಯರ್ಥಿ ಆಯ್ಕೆಯಾಗಿದೆ.
ಹಂತ-ಹಂತದಲ್ಲಿ ಚುನಾವಣೆ ಮಾಡುತ್ತೇವೆ. ಪಕ್ಷದೊಳಗಿನ ಗಲಾಟೆಗಳಿಂದ ನಮ್ಮಲ್ಲಿದ್ದ ಮೂರು ಗುಂಪು, ಈಗ ಒಂದಾಗಿವೆ. ಅಹಿಂದ ಮತಗಳು ಕಾಂಗ್ರೆಸ್ ಪರವಾಗಿಯೇ ಇರುತ್ತವೆ. ಎರಡೂ ಕ್ಷೇತ್ರಗಳಲ್ಲಿ ಗೆಲುವು ಖಚಿತ ಎಂದರು.
ನಾಳೆಯಿಂದ ಬಾಗಲಕೋಟೆಯಲ್ಲಿ ಪ್ರಚಾರ ಆರಂಭಿಸಿ, ದಾವಣಗೆರೆಗೂ ಹೋಗುತ್ತೇನೆ. ಪಕ್ಷ ಮತ್ತು ಅಭ್ಯರ್ಥಿ ಜತೆಗೆ ಸರ್ಕಾರವಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲ ನೀಡಲಿವೆ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯವರು ಪ್ರಚಾರ ಮಾಡುತ್ತಾರೆ. ನಾವು ಅಹಿಂದ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತೇವೆ. ಎರಡೂ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
ಅನುಮತಿ ಇಲ್ಲ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಸಚಿವಾಲಯದ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ದೊರೆತಿಲ್ಲ, ನಾನೇ ನೇತೃತ್ವ ವಹಿಸಿ ದೆಹಲಿಗೆ ಸರ್ವಪಕ್ಷದ ನಿಯೋಗ ಕೊಂಡೊಯ್ಯುತ್ತೇನೆ. ಹೆಚ್ಚುವರಿ ನೀರು ಬಿಡುಗಡೆಗೆ ಆಗ್ರಹಿಸಲು ಮಹಾರಾಷ್ಟ್ರಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ ಎಂದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಟ್ಟಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
Laxmi News 24×7