ರಾಜ್ಯದ ಎಲ್ಲ ಪ್ರಮುಖ ನೀರಾವರಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ
ಮಹಾದಾಯಿ, ಕಳಸಾ-ಬಂಡೂರಿ, ಮೇಕೆದಾಟು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನೀರಾವರಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕನ್ನಟ ಒಕ್ಕೂಟ ಕರ್ನಾಟಕ ರಾಜ್ಯ ಸಂಘಟನೆಯಿಂದ ಆ.13 ರಂದು ಅಖಂಡ ಕರ್ನಾಟಕ ಬಂದ್ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ರೈತರು ನೀರಾವರಿ ಯೋಜನೆಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಅವರು ಮಾತನಾಡಿ, ಕಾವೇರಿ ವಿಚಾರ ಮಾತ್ರ ಕರ್ನಾಟಕದ ಸಮಸ್ಯೆಯಲ್ಲ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು, ಕರಾವಳಿ ಸೇರಿದಂತೆ ಇಡೀ ರಾಜ್ಯದ ಬೇಡಿಕೆಗಳ ಬಗ್ಗೆ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಾಗಿದೆ. ಕರ್ನಾಟಕದ ಯಾವುದೇ ಭಾಗವನ್ನು ಪ್ರತ್ಯೇಕವಾಗಿ ನೋಡದೆ, ಸಮಗ್ರ ಕರ್ನಾಟಕದ ಹಿತದೃಷ್ಟಿಯಿಂದ ಹೋರಾಟ ನಡೆಸಬೇಕು ಎಂದರು.
ಮಹಾದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಾಗಿ ಹಿಂದೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗಿದೆ. ರಸ್ತೆ ತಡೆ, ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಇದೀಗ ಮತ್ತೆ ಈ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಧ್ವನಿ ಎತ್ತುವ ಅಗತ್ಯವಿದೆ ಎಂದು ಹೇಳಿದರು.
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನೀರಿನ ಕೊರತೆಯಿದ್ದು, ಮೇಕೆದಾಟು ಯೋಜನೆ ಕೂಡಲೇ ಅನುಷ್ಠಾನಗೊಳ್ಳಬೇಕು. ಅದೇ ರೀತಿ ಮಹಾದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕೃಷ್ಣಾ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಬೇಡಿಕೆಗಳಿಗೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಕೈಗೊಳ್ಳಬೇಕು. ಗಡಿನಾಡು ಬೆಳಗಾವಿಯ ಸಮಗ್ರ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲೋಕನಾಥ ಹೆಬಸೂರ, ಹನುಮಂತಪ್ಪ ದಿವಗಿಹಳ್ಳಿ, ಬೀರಪ್ಪ ದೇಸನೂರ, ರುದ್ರಗೌಡ ಪಾಟೀಲ, ಮಹಾಂತೇಶ ಗೌರಿ, ಈರಣ್ಣ ಅಂಗಡಿ, ಫಕ್ಕೀರಗೌಡ ವೆಂಕನಗೌಡ, ಆರ್.ಎಂ.ನಾಯ್ಕರ್, ಯಲ್ಲಪ್ಪ ಡಿ, ಭರಮಪ್ಪ ಕಾತರಕಿ ಸೇರಿದಂತೆ ರೈತರು ಇದ್ದರು
Laxmi News 24×7