Breaking News

ಹುಬ್ಬಳ್ಳಿಯ KMCRI ಸಾಧನೆ: ಶಸ್ತ್ರಚಿಕಿತ್ಸೆ ಮಾಡಿ ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣ ಯಶಸ್ವಿಯಾಗಿ ಹೊರತೆಗೆದ ವೈದ್ಯರು!

Spread the love

ಹುಬ್ಬಳ್ಳಿ: 14 ದಿನಗಳ ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್​ಐ) ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಕುಂದಗೋಳ ಮೂಲದ ಮಹಿಳೆಯೊಬ್ಬರು ಕೆಎಂಸಿಆರ್‌ಐನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಸೆ.23 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನಲ್ಲಿ ಏನಾದರೂ ನ್ಯೂನತೆ ಇದೆಯೇ ಎಂದು ತಿಳಿಯಲು ಪರೀಕ್ಷಿಸುವ ವೇಳೆ, ಶಿಶುವಿನಲ್ಲಿ ಭ್ರೂಣ (Fetus in fetu) ಇರುವುದು ಪತ್ತೆಯಾಗಿತ್ತು. ಭ್ರೂಣಕ್ಕೆ ಬೆನ್ನು ಹುರಿ, ಚರ್ಮ, ಕೈ – ಕಾಲು, ಕರುಳು ಇದ್ದವು, ಆದರೆ ಮಿದುಳು ಮತ್ತು ಹೃದಯ ಇರಲಿಲ್ಲ ಎಂದು ಅಲ್ಟ್ರಾಸೌಂಡ್​ನಿಂದ ಗೊತ್ತಿದೆ.

ಶಿಶುವಿನಲ್ಲಿದ್ದ ಭ್ರೂಣವನ್ನು ಹೊರ ತೆಗೆದ ಡಾಕ್ಟರ್ಸ್​: ನಂತರ ಎಂಆರ್​ಐ ಮಾಡಿದಾಗ ಭ್ರೂಣ ಇರುವುದು ದೃಢಪಟ್ಟಿತ್ತು. ಶಸ್ತ್ರಚಿಕಿತ್ಸಾ ತಜ್ಞರ ಒಪ್ಪಿಗೆ ಪಡೆದು ಮಂಗಳವಾರ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಪಿಎಂಎಸ್‌ಎಸ್‌ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ್ ಎಸ್ ಅವರ ನೇತೃತ್ವದಲ್ಲಿ 45 ನಿಮಿಷ ಶಸ್ತ್ರಚಿಕಿತ್ಸೆ ನೆರವೇರಿಸಿ, ಶಿಶುವಿನಲ್ಲಿದ್ದ ಭ್ರೂಣವನ್ನು ಹೊರ ತೆಗೆಯಲಾಗಿದೆ. ಇದಕ್ಕೂ ಮೊದಲು ಲ್ಯಾಪ್ರೊಸ್ಕೋಪಿ ನಡೆಸಲಾಗಿತ್ತು.

ಈ ಬಗ್ಗೆ ಅಧೀಕ್ಷಕರು ಹೇಳಿದ್ದಿಷ್ಟು: ಕೆಎಂಸಿಆರ್​​ಐನ ವೈದ್ಯಕೀಯ ಅಧೀಕ್ಷಕ ಡಾ‌. ಈಶ್ವರ ಹಸಬಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಸೆ.23 ರಂದು ಕುಂದಗೋಳ ‌ಮೂಲದ ಮಹಿಳೆಗೆ ಜನಿಸಿದ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಕಂಡು ಬಂದಿತ್ತು. ಹೀಗಾಗಿ ವೈದ್ಯರು ಸೋಮವಾರ ಮತ್ತೊಮ್ಮೆ ತಪಾಸಣೆ ನಡೆಸಿ ಆ ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ‌. ಪಿಎಂಎಸ್​ಎಸ್​ನ ವೈದ್ಯಕೀಯ ಅಧೀಕ್ಷಕ ಹಾಗೂ ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಜಶೇಖರ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸದ್ಯ ನವಜಾತ ಶಿಶು ಆರೋಗ್ಯವಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ಹೊರ ತಗೆದ ಇನ್ನೊಂದು ಭ್ರೂಣವನ್ನು ಸಂರಕ್ಷಿಸಿಡಲಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅದನ್ನು ಬಳಸಿಕೊಳ್ಳಲಾಗುತ್ತದೆ. ಭ್ರೂಣವನ್ನು ಹಾಗೆ ಬಿಟ್ಟಿದ್ದರೆ ಮುಂದಿನ ದಿನಗಳಲ್ಲಿ ಮಗುವಿಗೆ ತೊಂದರೆಯಾಗುತ್ತಿತ್ತು. ಆದರೆ ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಭ್ರೂಣವನ್ನು ಹೊರತೆಗೆದಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.

ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸಕರ ಪ್ರತಿಕ್ರಿಯೆ: ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ‌. ರಾಜಶೇಖರ ಎಸ್ ಅವರು ಈಟಿವಿ ಭಾರತದ ಜೊತೆ ಮಾತನಾಡಿ, ಕುಂದಗೋಳ ಮೂಲದ ಮಹಿಳೆಯ ಎರಡನೇ ಮಗು ಇದಾಗಿದೆ. ಮಗು ಹುಟ್ಟುವ ಮುನ್ನವೇ ಸ್ಕ್ಯಾನ್ ಮಾಡಿದಾಗ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಪತ್ತೆಯಾಗಿತ್ತು. ತಾಯಿಗೆ ಸಹಜ ಹೆರಿಗೆಯಾದ ಮೇಲೆ ಎಂಆರ್​ಐ ಸ್ಕ್ಯಾನ್ ಮಾಡಿ ಭ್ರೂಣ ಇರುವುದನ್ನು ದೃಢಪಡಿಸಿಕೊಳ್ಳಲಾಯಿತು. ಸೋಮವಾರ ಶಸ್ತ್ರಚಿಕಿತ್ಸೆ ಮಾಡಿ ಭ್ರೂಣದಲ್ಲಿ ಭ್ರೂಣ (Fetus in fetu) ಹೊರತಗೆಯಲಾಗಿದೆ ಎಂದು ವಿವರಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ