Breaking News

ಕರ್ನಾಟಕದಲ್ಲಿ 2,14,234 ಅಪರಾಧ; ಬೆಂಗಳೂರಲ್ಲೂ ನಿರಂತರ ಏರುಗತಿ!

Spread the love

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಭಾರತದಲ್ಲಿನ ಅಪರಾಧಗಳ ಕುರಿತಾದ ಅಂಕಿ-ಅಂಶಗಳ ಒಳಗೊಂಡ 2023ರ ವರದಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ವರದಿಯ ವಿಶ್ಲೇಷಣೆ ಹೀಗಿದೆ.

NCRBಯ ಭಾರತದಲ್ಲಿ ಅಪರಾಧ-2023 ವರದಿಯು 71ನೇ ಆವೃತ್ತಿಯಾಗಿದ್ದು, 2023ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿ 1ರಿಂದ ಡಿಸೆಂಬರ್ 31, 2023ರವರೆಗೆ) ನಡೆದ ಅಪರಾಧ ದತ್ತಾಂಶಗಳ ಮಾಹಿತಿ ನೀಡಲಾಗಿದೆ. ಕರ್ನಾಟಕದಲ್ಲಿ ಅಪರಾಧ ಪ್ರಮಾಣದಲ್ಲಿ ವಿಶೇಷವಾಗಿ ಸೈಬರ್ ಅಪರಾಧ ಹಾಗೂ ದುರ್ಬಲರ ವಿರುದ್ಧದ ಅಪರಾಧಗಳಲ್ಲಿ ಏರಿಕೆ ಕಂಡುಬಂದಿದೆ.

2021ರಿಂದ 2023ರವರೆಗಿನ ಅಪರಾಧಗಳ ಹೋಲಿಕೆ:

ವರ್ಷ 2021 2022 2023
ಭಾರತೀಯ ದಂಡ ಸಂಹಿತೆ (IPC) 1,15,728 1,29,461 1,48,648
ವಿಶೇಷ & ಸ್ಥಳೀಯ ಕಾನೂನುಗಳು(SLL) 47,969 51,281 65,586
ಒಟ್ಟಾರೆ 1,63,697 1,80,742 2,14,234

2023ರಲ್ಲಿ ರಾಜ್ಯದಲ್ಲಿ ಒಟ್ಟು 2,14,234 ಪ್ರಮುಖ ಅಪರಾಧಗಳು ವರದಿಯಾಗಿವೆ. ಅದರಲ್ಲಿ, 1,48,648 ಭಾರತೀಯ ದಂಡ ಸಂಹಿತೆ (ಐಪಿಸಿ) ಅಪರಾಧ ಪ್ರಕರಣಗಳು ಹಾಗೂ 65,586 ವಿಶೇಷ ಮತ್ತು ಸ್ಥಳೀಯ ಕಾನೂನುಗಳ (ಎಸ್‌ಎಲ್‌ಎಲ್) ಅಡಿ ದಾಖಲಾದ ಪ್ರಕರಣಗಳು ಸೇರಿವೆ. ಈ ಮೂಲಕ ರಾಜ್ಯದಲ್ಲಿ 2019ರಲ್ಲಿ 1,63,691 ಇದ್ದ ಕೇಸ್​ಗಳು 2023ರಲ್ಲಿ 2,14,234ಕ್ಕೆ ಏರಿಕೆಯಾಗಿವೆ.

2022ರಲ್ಲಿ ರಾಜ್ಯದಲ್ಲಿ 1,29,461 ಭಾರತೀಯ ದಂಡ ಸಂಹಿತೆ (ಐಪಿಸಿ) ಅಪರಾಧಗಳು ಮತ್ತು 51,281 ವಿಶೇಷ ಮತ್ತು ಸ್ಥಳೀಯ ಕಾನೂನುಗಳ (ಎಸ್‌ಎಲ್‌ಎಲ್) ಅಡಿ ದಾಖಲಾದ ಅಪರಾಧಗಳು ಸೇರಿದಂತೆ ಒಟ್ಟೂ 1,80,742 ಪ್ರಮುಖ ಕೇಸ್​ಗಳನ್ನು ನೋಡಬಹುದು.

ಹಾಗೆಯೇ, 2021ರಲ್ಲಿ 1,15,728 ಭಾರತೀಯ ದಂಡ ಸಂಹಿತೆ (ಐಪಿಸಿ) ಅಪರಾಧಗಳು ಮತ್ತು 47,969 ವಿಶೇಷ ಮತ್ತು ಸ್ಥಳೀಯ ಕಾನೂನುಗಳು (ಎಸ್‌ಎಲ್‌ಎಲ್) ಅಪರಾಧಗಳನ್ನು ಒಳಗೊಂಡ ಒಟ್ಟು 1,63,697 ಅಪರಾಧಗಳು ದಾಖಲಾಗಿದ್ದವು.

ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧ:

ವರ್ಷ ಪ್ರಕರಣ
2021 14,468
2022 17,813
2023 20,336

ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣದಲ್ಲೂ 2021ಕ್ಕೆ ಹೋಲಿಸಿದರೆ, 2023ರಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 5,868 ಪ್ರಕರಣಗಳು ಹೆಚ್ಚಾಗಿದ್ದು, ಮೂರು ವರ್ಷಗಳಲ್ಲಿ 40.6%ರಷ್ಟು ಹೆಚ್ಚಳವಾಗಿದೆ. 2022ರಲ್ಲಿ ತೀವ್ರ ಏರಿಕೆ ಉಂಟಾಗಿದ್ದು, ಬಳಿಕ 2023ರಲ್ಲಿಯೂ ಅದು ಮುಂದುವರೆದಿದೆ.

ಹಿರಿಯ ನಾಗರಿಕರ ವಿರುದ್ಧ ಅಪರಾಧ:

ವರ್ಷ 2021 2022 2023
ಪ್ರಕರಣ 1,442 1,583 1,840

2023ರಲ್ಲಿ ಕರ್ನಾಟಕದಲ್ಲಿ ಹಿರಿಯ ನಾಗರಿಕರ (60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ವಿರುದ್ಧದ ಅಪರಾಧಗಳ ಒಟ್ಟು 1,840 ಪ್ರಕರಣಗಳು ವರದಿಯಾಗಿವೆ. 2022ರಲ್ಲಿ 1,583 ಪ್ರಕರಣಗಳು ಹಾಗೂ 2021ರಲ್ಲಿ 1,442 ಕೇಸ್​​ ದಾಖಲಾಗಿದ್ದವು. ಇದರೊಂದಿಗೆ 2021ಕ್ಕೆ ಹೋಲಿಸಿದರೆ, 2023ರಲ್ಲಿ ಒಟ್ಟು 398 ಪ್ರಕರಣಗಳು ಹೆಚ್ಚಳವಾಗಿದೆ. ಮೂರು ವರ್ಷಗಳಲ್ಲಿ ಶೇ.27.6ರಷ್ಟು ಏರಿಕೆ ಆದಂತಾಗಿದೆ.

ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 2023ರಲ್ಲಿ ಹಿರಿಯ ನಾಗರಿಕರ ವಿರುದ್ಧ ದಾಖಲಾದ 1,840 ಅಪರಾಧ ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ 649 ಪ್ರಕರಣಗಳು ವರದಿಯಾಗಿರುವುದು ಗಮನಾರ್ಹ.

ಬಾಲಾಪರಾಧಿಗಳ ಮೇಲಿನ ಕೇಸ್ (ಐಪಿಸಿ+ಎಸ್‌ಎಲ್‌ಎಲ್) – 2021-2023

ವರ್ಷ 2021 2022 2023
ಪ್ರಕರಣ 527 558 883

2023ರಲ್ಲಿ ತೀವ್ರ ಏರಿಕೆ: 2023ರಲ್ಲಿ ಬಾಲಾಪರಾಧ ಪ್ರಕರಣಗಳು ಶೇ.58ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಮೂರು ವರ್ಷಗಳ ಅವಧಿಯಲ್ಲಿ ಅತ್ಯಧಿಕ ಜಿಗಿತವಾಗಿದೆ. 2021ಕ್ಕೆ ಹೋಲಿಸಿದರೆ 2023ರಲ್ಲಿ 356 ಪ್ರಕರಣಗಳ ಏರಿಕೆ ಕಂಡುಬಂದಿದೆ. ಮೂರು ವರ್ಷಗಳಲ್ಲಿ ಬಾಲಾಪರಾಧಗಳಲ್ಲಿ ಶೇ.67.5ರಷ್ಟು ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ನಡೆದ ಹಿಂಸಾತ್ಮಕ ಅಪರಾಧಗಳು:

ವರ್ಷ ಪ್ರಕರಣ
2021 15,277
2022 17,091
2023 17,902

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ವರದಿಯಾದ ಹಿಂಸಾತ್ಮಕ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. 2021ರಲ್ಲಿ, 15,277 ಪ್ರಕರಣಗಳು ದಾಖಲಾದರೆ, 2022ರಲ್ಲಿ 17,091 ಪ್ರಕರಣಗಳಿಗೆ ಏರಿದ್ದು, 2023ರ ಹೊತ್ತಿಗೆ, ಇದು 17,902 ಪ್ರಕರಣಗಳಿಗೆ ತಲುಪಿದೆ.

ಮಹಾನಗರಗಳಲ್ಲಿ ಹಿಂಸಾತ್ಮಕ ಅಪರಾಧಗಳು (ಘಟನೆಗಳು ಮತ್ತು ಅಪರಾಧ ದರ) – 2021-2023

ವರ್ಷ ಬೆಂಗಳೂರು ದೆಹಲಿ ಮುಂಬೈ ಹೈದರಾಬಾದ್ ಚೆನ್ನೈ
2021 2,393 11,653 4,926 1,232 1,450
2022 2,769 11,369 4,987 1,364 1,031
2023 3,528 11,014 4,750 1,483 973

NCRB ವರದಿ ಪ್ರಕಾರ, ಬೆಂಗಳೂರು ನಗರವು ದೆಹಲಿ ಮತ್ತು ಮುಂಬೈ ನಂತರ ಭಾರತದ ಮೂರನೇ ಅತ್ಯಂತ ಹಿಂಸಾತ್ಮಕ ಮೆಟ್ರೋ ಸಿಟಿ ಎಂಬ ಕುಖ್ಯಾತಿಗೆ ಒಳಗಾಗಿದೆ. ದೆಹಲಿ ಮತ್ತು ಮುಂಬೈನಲ್ಲಿ ಅತಿ ಹೆಚ್ಚು ಹಿಂಸಾತ್ಮಕ ಅಪರಾಧಗಳು ದಾಖಲಾಗುತ್ತಲೇ ಇದ್ದು, ಬೆಂಗಳೂರು ಸಹ ಕಳೆದ ಮೂರು ವರ್ಷಗಳಲ್ಲಿ ತೀವ್ರ ಏರಿಕೆಯನ್ನು ದಾಖಲಿಸಿದೆ. 2023ರಲ್ಲಿ ಬೆಂಗಳೂರಿನಲ್ಲಿ ಒಟ್ಟಾರೆ ಹಿಂಸಾತ್ಮಕ ಅಪರಾಧಗಳು 3,528 ಇದ್ದು, ದೆಹಲಿಯಲ್ಲಿ 11,014, ಮುಂಬೈನಲ್ಲಿ 4,750, ಹೈದರಾಬಾದ್‌ನಲ್ಲಿ 1,483, ಚೆನ್ನೈನಲ್ಲಿ 973 ಮತ್ತು ಕೋಲ್ಕತ್ತಾದಲ್ಲಿ 919 ಪ್ರಕರಣಗಳು ದಾಖಲಾಗಿವೆ.

ಮಾನವನ ದೇಹದ ಮೇಲೆ ಪರಿಣಾಮ ಬೀರುವ ಅಪರಾಧಗಳು:

ವಿಭಾಗ 2021 2022 2023 ಸ್ಥಿತಿ
ಒಟ್ಟು 5,414 5,817 6,360 ಏರಿಕೆ
ಕೊಲೆ (ಐಪಿಸಿ ಸೆಕ್ಷನ್ 302) 1,357 1,404 1,322 ಇಳಿಕೆ
ವರದಕ್ಷಿಣೆ ಸಾವುಗಳು (ಐಪಿಸಿ ಸೆಕ್ಷನ್ 304 ಬಿ) 163 165 156 ಇಳಿಕೆ
ಆ್ಯಸಿಡ್ ದಾಳಿ (326A IPC) 3 8 2 ಇಳಿಕೆ
ಲೈಂಗಿಕ ಕಿರುಕುಳ (ಐಪಿಸಿ ಸೆಕ್ಷನ್ 354ಎ) 444 222 469 ಏರಿಕೆ
ಅಪಹರಣ 2,879 3,365 3,744 ಏರಿಕೆ
ಮಾನವ ಕಳ್ಳಸಾಗಣೆ (ಸೆಕ್ಷನ್ 370, 370A ಐಪಿಸಿ) 13 58 11 ಇಳಿಕೆ
ಅತ್ಯಾಚಾರ (ಐಪಿಸಿ ಸೆಕ್ಷನ್ 376) 555 595 656 ಏರಿಕೆ

2023ರಲ್ಲಿ ಮಾನವ ದೇಹದ ಮೇಲೆ ಪರಿಣಾಮ ಬೀರುವ ಒಟ್ಟು 6,360 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 3,744 ಅಪಹರಣ, 1,322 ಕೊಲೆ ಹಾಗೂ 656 ಅತ್ಯಾಚಾರ ಕೇಸ್​ಗಳು ಸೇರಿವೆ.

ಹಾಗೆಯೇ, 2022ರಲ್ಲಿ ಒಟ್ಟು 5,818 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 3,365 ಅಪಹರಣ, 1,404 ಕೊಲೆ ಮತ್ತು 595 ಅತ್ಯಾಚಾರ ಪ್ರಕರಣಗಳಿವೆ.

ಕೊಲೆ ಪ್ರಕರಣಗಳು:

ವರ್ಷ 2021 2022 2023
ಪ್ರಕರಣ 1357 1404 1322

2022ರಲ್ಲಿ ಕೊಲೆ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಬಹುಶಃ ಸಾಂಕ್ರಾಮಿಕ ರೋಗದ ಬಳಿಕದ ಬೆಳವಣಿಗೆಗಳು ಅಥವಾ ನಗರ ಅಪರಾಧ ಪ್ರಮಾಣದಲ್ಲಿನ ಹೆಚ್ಚಳವು ಇದಕ್ಕೆ ಕಾರಣವಿರಬಹುದು. 2023ರಲ್ಲಿ ಕುಸಿತ ದಾಖಲಾಗಿದ್ದು, ಇದು ಕಾನೂನು ಜಾರಿ ಅಥವಾ ಪ್ರಕರಣಗಳ ತಡೆಗಟ್ಟುವ ಕ್ರಮಗಳಲ್ಲಿನ ಸುಧಾರಣೆಯನ್ನು ಸೂಚಿಸುತ್ತದೆ.

ಒಟ್ಟಾರೆಯಾಗಿ, ಕೊಲೆ ಪ್ರಮಾಣವು ಮೂರು ವರ್ಷಗಳಲ್ಲಿ ತುಲನಾತ್ಮಕವಾಗಿ ಸ್ಥಿರವಾಗಿದ್ದು, 2021ರಿಂದ 2023ರವರೆಗೆ 2.6%ರಷ್ಟು ಇಳಿಕೆಯಾಗಿದೆ. 2022ರಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿದ್ದು, 2021ಕ್ಕೆ ಹೋಲಿಸಿದರೆ 1,357 ಪ್ರಕರಣಗಳ ಹೆಚ್ಚಳ ಉಂಟಾಗಿದೆ.

ಉದ್ದೇಶಿತ ಕೊಲೆಗಳು:

ವರ್ಷ ಒಟ್ಟು ಕೊಲೆಗಳು ವಿವಾದ ಪ್ರೇಮ ಪ್ರಕರಣ ವರದಕ್ಷಿಣೆ ಸಕಾರಣವಿಲ್ಲದ ಕೊಲೆ
2021 1,357 531 51 18 14
2022 1,404 706 44 14 10
2023 1,322 418 55 12 20

2023ರಲ್ಲಿ ಕರ್ನಾಟಕದಲ್ಲಿ ಒಟ್ಟು 1,322 ಕೊಲೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ವಿವಾದಗಳಿಂದಾಗಿ ಸಂಭವಿಸಿವೆ. ವಿವಾದಗಳ ಹಿನ್ನೆಲೆಯಲ್ಲಿ ನಡೆದ ಕೊಲೆಗಳ ಪ್ರಕರಣಗಳ ಪ್ರಮಾಣವು 2022ರಲ್ಲಿ ಗರಿಷ್ಠ ಮಟ್ಟ ತಲುಪಿದ್ದು,706 ಪ್ರಕರಣಗಳು ಜರುಗಿವೆ. ಬಳಿಕ 2023ರಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, 418 ಪ್ರಕರಣಗಳು ವರದಿಯಾಗಿವೆ. ಇದು 40.8% ಕುಸಿತವಾಗಿದೆ.

ಪ್ರೇಮ ಪ್ರಕರಣ ಹಿನ್ನೆಲೆಯ ಕೊಲೆಗಳಲ್ಲಿ ಏರಿಳಿತ ಕಂಡುಬಂದಿದ್ದು, 2022ರಲ್ಲಿ ಇಳಿಕೆಯಾದರೆ, ಪುನಃ 2023ರಲ್ಲಿ ಏರಿಕೆ ದಾಖಲಾಗಿದೆ. ವರದಕ್ಷಿಣೆ ಸಂಬಂಧಿತ ಕೊಲೆಗಳು ಸ್ಥಿರವಾಗಿ ಕಡಿಮೆಯಾಗಿದ್ದು, 2021ರಲ್ಲಿ 18 ಕೇಸ್​ಗಳಿಂದ 2023ರಲ್ಲಿ 12ಕ್ಕೆ ಇಳಿದಿವೆ.

2022ಕ್ಕೆ ಹೋಲಿಸಿದರೆ 2023ರಲ್ಲಿ ಸಕಾರಣವಿಲ್ಲದ ಕೊಲೆಗಳು ದ್ವಿಗುಣಗೊಂಡಿವೆ. ಇದು ತನಿಖೆಯ ಸವಾಲುಗಳು ಹಾಗೂ ಹೆಚ್ಚು ಕ್ಷಿಷ್ಟಕರ ಪ್ರಕರಣಗಳನ್ನು ಸೂಚಿಸುತ್ತದೆ.

ಮಹಿಳೆಯರ ವಿರುದ್ಧ ಐಪಿಸಿ ಅಪರಾಧಗಳು (ಅಪರಾಧದ ಬಗ್ಗೆ ಸಮಗ್ರ ಮಾಹಿತಿ)

ವರ್ಷ ಅತ್ಯಾಚಾರ/ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ವರದಕ್ಷಿಣೆ ಸಾವು (ಸೆಕ್ಷನ್ 304B ಐಪಿಸಿ) ಮಹಿಳೆಯರ ಆತ್ಮಹತ್ಯೆಗೆ ಪ್ರಚೋದನೆ ಮಹಿಳೆಯರ ನಮ್ರತೆಯನ್ನು ಕೆಣಕುವ ಉದ್ದೇಶದಿಂದ ಹಲ್ಲೆ ಅತ್ಯಾಚಾರ (ಐಪಿಸಿ ಸೆಕ್ಷನ್ 376) ಪತಿ, ಅಥವಾ ಅತನ ಸಂಬಂಧಿಕರಿಂದ ಕ್ರೌರ್ಯ ಮಹಿಳೆಯರ ಅಪಹರಣ
2021 20 163 311 5,985 555 2,408 920
2022 8 166 296 7,150 595 2,851 1,844
2023 6 160 280 8,284 656 3,141 2,447

NCRB ಮಾಹಿತಿ ಪ್ರಕಾರ, 2023ರಲ್ಲಿ ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ತೀವ್ರ ಏರಿಕೆ ದಾಖಲಾಗಿದೆ. ಮಹಿಳೆಯರ ಅಪಹರಣವು ಅತಿ ಹೆಚ್ಚು ಏರಿಕೆ ಕಂಡಿದೆ. ಕೇವಲ ಎರಡು ವರ್ಷಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಪತಿ ಅಥವಾ ಸಂಬಂಧಿಕರಿಂದ ಆತ್ಮಹತ್ಯೆ ಮತ್ತು ಕ್ರೌರ್ಯಕ್ಕೆ ಪ್ರಚೋದನೆಯೂ ತೀವ್ರವಾಗಿ ಏರಿದೆ. ಇದು ಆಳವಾಗಿ ಬೇರೂರಿರುವ ಕೌಟುಂಬಿಕ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ. ಅತ್ಯಾಚಾರ ಪ್ರಕರಣಗಳು ಸ್ಥಿರವಾಗಿ ಹೆಚ್ಚಾಗಿವೆ. ಆದರೆ ವರದಕ್ಷಿಣೆ ಸಾವುಗಳು ಮತ್ತು ಅತ್ಯಾಚಾರ/ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿರುವ ಕೇಸ್​ಗಳು ಕಡಿಮೆಯಾಗಿವೆ. ಮಹಿಳೆಯ ನಮ್ರತೆಯನ್ನು ಕೆಣಕುವ ಉದ್ದೇಶದಿಂದ ಹಲ್ಲೆ ಮಾಡಿರುವ ಕೇಸ್​ಗಳ ಸಂಖ್ಯೆಯು ತುಲನಾತ್ಮಕವಾಗಿ ಸ್ಥಿರವಾಗಿದ್ದರೂ, ಕಳವಳಕಾರಿಯಾಗಿದೆ.

ಮಕ್ಕಳ ವಿರುದ್ಧ ಅಪರಾಧ:

ವರ್ಷ 2021 2022 2023
ಪ್ರಕರಣ 7261 7988 8929

ದತ್ತಾಂಶದ ಪ್ರಕಾರ, ರಾಜ್ಯದಲ್ಲಿ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. 2021ಕ್ಕೆ ಹೋಲಿಸಿದರೆ, 2023ರಲ್ಲಿ 1,668 ಪ್ರಕರಣಗಳ ಏರಿಕೆ ಕಂಡುಬಂದಿದೆ. ಮೂರು ವರ್ಷಗಳಲ್ಲಿ 23% ಹೆಚ್ಚಳವಾಗಿದೆ. 2023ರಲ್ಲಿ ಮಕ್ಕಳ ವಿರುದ್ಧ 8,929 ಅಪರಾಧ ಪ್ರಕರಣಗಳು ವರದಿಯಾಗಿವೆ.

ಎಸ್‌ಸಿ ಮತ್ತು ಎಸ್‌ಟಿ ವಿರುದ್ಧದ ಅಪರಾಧ:

ವರ್ಗ 2021 2022 2023
ಎಸ್​ಸಿ 1,673 1,977 1,923
ಎಸ್​ಟಿ 361 438 434

2022ರಲ್ಲಿ ಎಸ್​ಸಿ ಜನಾಂಗದ ವಿರುದ್ಧದ ಅಪರಾಧಗಳು ಉತ್ತುಂಗಕ್ಕೇರಿದೆ. ಬಳಿಕ 2023ರಲ್ಲಿ ಸ್ವಲ್ಪ ಕಡಿಮೆಯಾದರೂ ಸಹ 2021ಕ್ಕಿಂತಲೂ 15% ಹೆಚ್ಚಾಗಿದೆ.

ಹಾಗೆಯೇ, ಎಸ್​ಟಿ ಜನರ ವಿರುದ್ಧದ ಅಪರಾಧಗಳೂ ಸಹ ಇದೇ ಮಾದರಿಯಲ್ಲಿವೆ. 2022ರಲ್ಲಿ ಏರಿಕೆ, ಬಳಿಕ 2023ರಲ್ಲಿ ಸ್ವಲ್ಪ ಇಳಿಕೆ ದಾಖಲಾಗಿದೆ.

ಮಕ್ಕಳು ಕಾಣೆ ಪ್ರಕರಣ:

ವರ್ಷ ಗಂಡು ಹೆಣ್ಣು ತೃತೀಯಲಿಂಗಿ ಒಟ್ಟು
2021 920 1,237 0 2,157
2022 894 823 0 1,717
2023 706 643 0 1,349

2023ರಲ್ಲಿ ಒಟ್ಟು 1,349 ಮಕ್ಕಳು (706 ಗಂಡು, 643 ಹೆಣ್ಣು) ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. 2021 ಹಾಗೂ 2022ಕ್ಕೆ ಹೋಲಿಸಿದರೆ, 2023ರಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ.

ವಿದೇಶಿಯರ ವಿರುದ್ಧ ಅಪರಾಧ:

ರಾಜ್ಯ 2021 2022 2023
ಕರ್ನಾಟಕ 27 28 32

2022ರಲ್ಲಿ ಕರ್ನಾಟಕದಲ್ಲಿ ವಿದೇಶಿಯರ ವಿರುದ್ಧ 28 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಒಟ್ಟು 32 ಅಪರಾಧ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಹೆಚ್ಚಳ ಕಂಡುಬಂದಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ