ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ‘ಬಸವ ಸಂಸ್ಕೃತಿ ಅಭಿಯಾನ-2025’ರ ಸಮಾರೋಪ ಸಮಾರಂಭದಲ್ಲಿ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ‘ಧರ್ಮ’ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದೂ ಸೇರಿ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ವಿಶ್ವಗುರು ಬಸವಣ್ಣ ಅವರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮುದಾಯದ ಸುಮಾರು ಸಾವಿರಾರು ಮಂದಿ ಭಾಗವಹಿಸಿದ್ದರು. ಇವರ ಸಮ್ಮುಖದಲ್ಲಿ ತೆಗೆದುಕೊಂಡ 5 ನಿರ್ಣಯಗಳು ಇಲ್ಲಿವೆ.
- ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.
- 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಬಸವಾದಿ ಶರಣರು ಸೇರಿ ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.
- ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳ ನಿಜಧರ್ಮ ಲಿಂಗಾಯತ ಧರ್ಮ. ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭುದ್ಯಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.
- ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು.
- ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು.
ಇದೇ ವೇಳೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, “ನಮ್ಮದು ಲಿಂಗಾಯತ ಧರ್ಮ, ಬಸವ ಧರ್ಮ. ನಾವು ಬೇರೆಯವರನ್ನು ಟೀಕೆ ಮಾಡಲ್ಲ. ನಮ್ಮ ಧರ್ಮ ಪ್ರಸಾರ ಆಗಬೇಕು. ಬಸವ ಧರ್ಮ ಕನ್ನಡ ಧರ್ಮ. ಈ ಧರ್ಮದ ಪ್ರಸಾರ ಹೆಚ್ಚು ಆಗಬೇಕು. ನಾವು ಭಾರತೀಯರು, ಭೌಗೋಳಿಕವಾಗಿ ನಾವು ಹಿಂದೂಗಳು. ಆದ್ರೆ ಧರ್ಮವಾಗಿ ನಮ್ಮದು ಬಸವ ಧರ್ಮ, ಲಿಂಗಾಯತ ಧರ್ಮ. ಯಾರನ್ನೂ ಟೀಕೆ ಮಾಡಲು ನಾವು ಹೋಗಲ್ಲ” ಎಂದು ತಿಳಿಸಿದರು.
Laxmi News 24×7