Breaking News

ಸೋಷಿಯಲ್‌ ಮೀಡಿಯಾದಲ್ಲಿ ರೌಡಿಗಳಿಗೆ ಬಿಲ್ಡಪ್: 8 ಮಂದಿಗೆ ಬಿಸಿ ಮುಟ್ಟಿಸಿದ ಪೊಲೀಸರು

Spread the love

ಬೆಂಗಳೂರು: ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ರೌಡಿಶೀಟರ್​ಗಳಿಗೆ ಬಿಲ್ಡಪ್​​ ಕೊಟ್ಟು ವೀಡಿಯೋ, ಫೋಟೋಗಳನ್ನು ಪ್ರಕಟಿಸುತ್ತಿದ್ದ 8 ಜನರಿಗೆ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಲೈಕ್ಸ್, ಫಾಲೋವರ್ಸ್ ಆಸೆಗೆ ರೌಡಿಗಳ ಬಗ್ಗೆ ಸಹಾನುಭೂತಿ ಮತ್ತು ಪರಸ್ಪರ ವೈಷಮ್ಯ ಮೂಡಿಸುವಂತಹ ಪೋಸ್ಟ್‌ಗಳನ್ನು ಮಾಡುತ್ತಿದ್ದ ಓರ್ವ ಯುವತಿ, ಬಾಲಕ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸರು ರೌಡಿಶೀಟ್ ತೆರೆದಿದ್ದಾರೆ.

“ದೀಪಕ್(22), ಕುಶಾಲ್ (20), ಮನೋಜ್ (22), ವೇಣು.ಎನ್ (19), ಕುಮಾರಿ ಕೈಸರ್ (21), ಮಂಜುನಾಥ್ (31), ಶಂಕರ್ (32) ಹಾಗೂ ಮತ್ತೋರ್ವ ಬಾಲಕನ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ” ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್​ ಬಿ.ಜಗಲಾಸರ್ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಭಾಗದಲ್ಲಿನ ರೌಡಿಶೀಟರ್​​ ಆಗಿರುವ ವಿಲ್ಸನ್ ಗಾರ್ಡನ್ ನಾಗ ಮತ್ತು ಮೃತ ರೌಡಿಶೀಟರ್​ ಸಿದ್ಧಾಪುರ ಮಹೇಶನ ತರಹೇವಾರಿ ವೀಡಿಯೋ, ಫೋಟೋಗಳಿಗೆ ಸಿನಿಮಾ ಡೈಲಾಗ್‌ಗಳನ್ನು ಸೇರಿಸುತ್ತಿದ್ದ ಆರೋಪಿಗಳು‌, ಅವುಗಳನ್ನು N BOSS ಮತ್ತು M BOSS ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು.

ಅಲ್ಲದೇ ರೌಡಿಶೀಟರ್‌ಗಳನ್ನು ಅಣ್ಣಾ, ಬಾಸು, ಕಿಂಗ್ ಎಂದೆಲ್ಲಾ ಸಂಭೋದಿಸಿ ವೀಡಿಯೋ ಕ್ರಿಯೇಟ್ ಮಾಡಿ ಅವರ ಮೇಲೆ ಸಹಾನುಭೂತಿ ಹಾಗೂ ಅವರ ಹಿಂಬಾಲಕರ ನಡುವೆ ದ್ವೇಷ ಮೂಡಿಸಲು ಕಾರಣವಾಗುತ್ತಿದ್ದರು. ಆರೋಪಿಗಳ ಸೋಷಿಯಲ್ ಮೀಡಿಯಾ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಈ ರೌಡಿ ಫ್ಯಾನ್ಸ್ ಕ್ರೇಜ್‌ಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್​ಗಳು, ಕಾಮೆಂಟ್​ಗಳು ಅಥವಾ ರಿಶೇರ್​ ಮಾಡಿಕೊಳ್ಳುವಂತಹ ವಿಚಾರಗಳ ಬಗ್ಗೆ ಸಾರ್ವಜನಿಕರು ವಿಶೇಷವಾಗಿ ಕಾಳಜಿವಹಿಸಬೇಕು. ಇದಕ್ಕೆ ಸಂಬಂಧಪಟ್ಟ ಹಾಗೆ ಸಿದ್ದಾಪುರ ಪೊಲೀಸ್​ ಠಾಣೆಯಲ್ಲಿ ಸಿದ್ದಾಪುರ ಪೊಲೀಸರು ಸ್ವಯಂಪ್ರೇರಿತರಾಗಿ ದೂರು-ಪ್ರತಿದೂರುಗಳನ್ನು ದಾಖಲಿಸಿದ್ದಾರೆ. ಆರೋಪಿಗಳ ಸೋಷಿಯಲ್ ಮೀಡಿಯಾ ಖಾತೆಗಳ ಬಳಕೆದಾರರನ್ನು ಪತ್ತೆ ಹಚ್ಚಿದಾಗ ಹಲವು ವಿದ್ಯಾರ್ಥಿಗಳಿರುವುದು ಬೆಳಕಿಗೆ ಬಂದಿದ್ದು, ಎಚ್ಚರಿಕೆ ನೀಡಲಾಗಿದೆ. ಸದ್ಯ ಎಂಟು ಜನರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಕ್ರಮಗಳನ್ನು ಜರುಗಿಸುವ ಕಾರ್ಯ ಮುಂದುವರೆಸುತ್ತೇವೆ” ಎಂದು ಡಿಸಿಪಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇತ್ತೀಚೆಗೆ, ಯುಪಿಯಲ್ಲಿ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹಾಗೂ ತಲೆಗೆ ಒಂದು ಲಕ್ಷ ರೂಪಾಯಿ ಘೋಷಿಸಲಾಗಿದ್ದ ಕುಖ್ಯಾತ ರೌಡಿಯನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದರು. ನಯೀಮ್ ಖುರೇಷಿ ಎಂಬವನೇ ಎನ್‌ಕೌಂಟರ್‌ ಆದ ಕುಖ್ಯಾತ ರೌಡಿ. ಈತನ ವಿರುದ್ಧ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಖಚಿತ ಮಾಹಿತಿಯ ಮೇರೆಗೆ ನಯೀಮ್‌ನನ್ನು ಸುತ್ತುವರೆದ ಪೊಲೀಸರು, ಶರಣಾಗುವಂತೆ ಸೂಚಿಸಿದ್ದರು. ಆದರೆ, ಆತ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದ. ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಯೀಮ್‌ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ