ಮೈಸೂರು: ಜಿಲ್ಲೆಯ ಟಿ.ನರಸೀಪುರ ಇನ್ಸ್ಪೆಕ್ಟರ್ ಧಮ್ಕಿ ವಿಚಾರದ ಬಗ್ಗೆ 5 ದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೌನ ಮುರಿದಿದ್ದು, ಧನಂಜಯ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ಸ್ಪೆಕ್ಟರ್ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಹೇಳಿದ್ದಾರೆ. ಬುದ್ಧಿವಾದ ಹೇಳುವ ದಾಟಿ ಸ್ವಲ್ಪ ಬದಲಾಗಿದೆ ಅಷ್ಟೇ. ಅದನ್ನ ಬಿಟ್ಟು ಬೇರೆ ಯಾವುದೇ ತಪ್ಪು ಮಾಡಿಲ್ಲ. ತಪ್ಪೇ ಮಾಡದ ಇನ್ಸ್ಪೆಕ್ಟರ್ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಮಸೀದಿ ಮುಂದೆ ಯಾಕೆ ಪಟಾಕಿ ಹೊಡೆಯಬೇಕು? ನಮ್ಮ ದೇವಸ್ಥಾನದ ಮುಂದೆ ಅವರು ಬಂದು ಪಟಾಕಿ ಹೊಡೆದರೆ ನಾವು ಸುಮ್ಮನಿರುತ್ತೇವಾ? ಚರ್ಚ್, ಮಸೀದಿ, ದೇವಸ್ಥಾನ ಮುಂದೆ ಪಟಾಕಿ ಹೊಡೆಯಬಹುದು ಅಂತ ಎಲ್ಲಿದೆ ಕಾನೂನು? ಯಾರೇ ತಪ್ಪು ಮಾಡಿದರೂ ತಪ್ಪೇ. ಈ ನಿಯಮ ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. ಅನುಮತಿ ಪಡೆದುಕೊಂಡೇ ಮೆರವಣಿಗೆ ಹೋಗಬೇಕು. ಯಾವ ರಸ್ತೆಗೆ ಬೇಕಾದರೂ ಹೋಗಲು ಅನುಮತಿ ಇಲ್ಲದೆ ಬಿಡಲು ಆಗಲ್ಲ. ಅನುಮತಿ ಪಡೆದುಕೊಂಡರೆ ಪೊಲೀಸರು ಭದ್ರತೆ ಮಾಡಿಕೊಡುತ್ತಾರೆ. ಅನುಮತಿ ಇಲ್ಲದೆ ಹೋಗಿ ಏನಾದರೂ ಹೆಚ್ಚು-ಕಡಿಮೆ ಆದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ರಣಹದ್ದುಗಳು:
ಬಿಜೆಪಿಯವರು ರಣಹದ್ದುಗಳಂತೆ ಕೋಮು ಗಲಭೆ ಆಗುವುದನ್ನೇ ಕಾಯುತ್ತಾರೆ. ಕೋಮುಗಲಭೆ ಆಗಬೇಕು, ಯಾರದ್ದಾದರೂ ಸಾವಾಗಬೇಕು. ಅದರ ಲಾಭ ಬಿಜೆಪಿ ಪಡೆಯಬೇಕು ಎನ್ನುವುದೇ ಬಿಜೆಪಿಯವರ ಪ್ಲ್ಯಾನ್. ಯಾವುದೇ ಕಡೆ ಕೋಮು ಗಲಭೆಯಾದರೂ ಅದರ ಚುನಾವಣಾ ಲಾಭ ಬಿಜೆಪಿಗೆ ಆಗಿದೆ. ಹೀಗಾಗಿ ಬಿಜೆಪಿಗೆ ಕೋಮು ಗಲಭೆ ಬಗ್ಗೆ ಆಸಕ್ತಿ ಜಾಸ್ತಿ. ನರಸೀಪುರದಲ್ಲಿ ಅದೇ ಕೆಲಸ ಮಾಡಲು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
Laxmi News 24×7