ನವದೆಹಲಿ: ಕಾಡಿನಲ್ಲಿ ಕಣ್ಮೆರೆಯಾಗುತ್ತಿರುವ ಮಾವೋವಾದಿಗಳು ಕಾಂಗ್ರೆಸ್ ಪಕ್ಷದೊಳಗೆ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಗರ ನಕ್ಸಲರ ಗ್ಯಾಂಗ್ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಪ್ರಧಾನಿಗಳು, ಕಾಂಗ್ರೆಸ್, ಟಿಎಂಸಿ, ಡಿಎಂಕೆ ವಿರುದ್ಧ ಕಿಡಿ ಕಾರಿದರು.
ಇಡೀ ದೇಶವೇ ಕಮ್ಯೂನಿಸಂ ನಿಂದ ದೂರ ಸರಿಯುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಅದೇ ಸಿದ್ಧಾಂತವನ್ನ ಅಳವಡಿಸಿಕೊಳ್ಳುತ್ತಾ ಸಾಗುತ್ತಿದೆ. ಕಾಡಿನಲ್ಲಿ ಮಾಯವಾಗುವ ಮಾವೋವಾದಿಗಳು ಕಾಂಗ್ರೆಸ್ ಪಕ್ಷದೊಳಗೆ ತಮ್ಮ ನೆಲೆ ಭದ್ರಪಡಿಸಿಕೊಳ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಗರ ನಕ್ಸಲರ ಗ್ಯಾಂಗ್ ಆಗುತ್ತಿದೆ. ಆದ್ರೆ ಕಾಂಗ್ರೆಸ್ ಒಂದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಜನ ತಿರಸ್ಕರಿಸಿದ ಸಿದ್ಧಾಂತ ಅಳವಡಿಸಿಕೊಳ್ಳುವ ಯಾರೇ ಆದರೂ ಜನರಿಂದ ತಿರಸ್ಕೃತಗೊಳ್ಳುತ್ತಾರೆ ಎಂದು ಮಾತಿನ ಚಾಟಿ ಬೀಸಿದರು.
ಮುಂದುವರಿದು… ಗಮನಾರ್ಹವೆಂದ್ರೆ ಈ ರಾಜ್ಯಗಳಲ್ಲಿ ಚುನಾವಣೆ ನಡೆಯುವಾಗ ವಿಶ್ವದಾದ್ಯಂತ ಹಲವಾರು ಘಟನೆಗಳು ನಡೆಯಿತ್ತಿದ್ದವು. ಎಲ್ಲೆಡೆ ಯುದ್ಧದ ಕೂಗು ಮೊಳಗುತ್ತಿತ್ತು. ಅಸ್ಥಿರತೆ ಮತ್ತು ಅವ್ಯವಸ್ಥೆಯ ವಾತಾವರಣವೇ ಮೇಲುಗೈ ಸಾಧಿಸಿತ್ತು. ಜಾಗತಿಕ ಆರ್ಥಿಕತೆ ಬಿಕ್ಕಟ್ಟಿನಲ್ಲಿರುವಂತೆ ಕಂಡುಬಂದಿತ್ತು. ಆದಾಗ್ಯೂ ಎದೆಗುಂದದೇ ಭಾರತದ ಜನರು ಸ್ಥಿರತೆಗಾಗಿ ಮತ ಚಲಾಯಿಸುತ್ತಿದ್ದರು ಎಂದು ಶ್ಲಾಘಿಸಿದರು.
ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಇಡೀ ವಿಶ್ವದ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. ಆದ್ರೆ ಭಾರತ ಈ ಬಿಕ್ಕಟ್ಟನ್ನು ಪೂರ್ಣ ಶಕ್ತಿಯಿಂದ ಸಮರ್ಥವಾಗಿ ಎದುರಿಸುತ್ತಿದೆ. ಇದರ ನಡುವೆಯೇ ಚುನಾವಣಾ ಫಲಿತಾಂಶವು ಭಾರತ ಒಗ್ಗಟ್ಟಾಗಿದೆ, ದೃಢನಿಶ್ಚಯದಿಂದ ಸಾಗುತ್ತಿದೆ ಎಂಬುದನ್ನು ತೋರಿಸಿದೆ ಎಂದು ಬಣ್ಣಿಸಿದರು.
ಮಹಿಳೆಯರು ಚುನಾವಣೆಯಲ್ಲಿ ಶಿಕ್ಷಿಸಿದ್ದಾರೆ
ಅಲ್ಲದೇ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ದೇಶದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ ತಿದ್ದುಪಡಿಯನ್ನು ವಿರೋಧಿಸುವ ಮೂಲಕ ಈ ಪ್ರಗತಿಯನ್ನು ತಡೆಯಲು ಪ್ರಯತ್ನಿಸಿದವು. ಮಹಿಳೆಯರಿಗೆ ಮೀಸಲಾತಿಯನ್ನು ವಿರೋಧಿಸುವ ಪಕ್ಷಗಳು ಈಗ ಮತದಾರರಿಂದ ತೀವ್ರ ಟೀಕೆಗೆ ಗುರಿಯಾಗಿವೆ. ಹಾಗಾಗಿಯೇ ಮಹಿಳೆಯರು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಅನ್ನು ಚುನಾವಣೆಯಲ್ಲಿ ಶಿಕ್ಷಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Laxmi News 24×7