Breaking News

ಬರದ ಹೊಡೆತಕ್ಕೆ ಅನ್ನದಾತ ಕಂಗಾಲು; ಪರಿಹಾರದ ಭರವಸೆ ನೀಡಿದ ಸಚಿವ ಎಂ.ಬಿ. ಪಾಟೀಲ

Spread the love

ಬರದ ಹೊಡೆತಕ್ಕೆ ಅನ್ನದಾತ ಕಂಗಾಲು; ಪರಿಹಾರದ ಭರವಸೆ ನೀಡಿದ ಸಚಿವ ಎಂ.ಬಿ. ಪಾಟೀಲ
ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಯಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ.
ಈ ನಡುವೆ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿ ಬೆಳೆ ಹಾನಿ ಪರಿಶೀಲಿಸಿದ್ದಾರೆ. ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾದರೆ ಸಚಿವರ ಭರವಸೆ ಏನು? ರೈತರ ಪರಿಸ್ಥಿತಿ ಹೇಗಿದೆ? 
ವಿಜಯಪುರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಅನ್ನದಾತನ ಆತಂಕ ಹೆಚ್ಚಾಗಿದೆ. ಬಿತ್ತನೆಯಾಗಿ ದಿನಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಲವು ಕಡೆ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ರೈತ ಸುರೇಶ ಚೌದರಿ ಅವರ ತೋಟದಲ್ಲಿನ ಹತ್ತಿ ಬೆಳೆ ವೀಕ್ಷಿಸಿದರು.
ಸ್ಥಳದಲ್ಲಿಯೇ ರೈತರು ಹಾಗೂ ಕೃಷಿ ಅಧಿಕಾರಿಗಳಿಂದ ಬೆಳೆ ಹಾನಿಯ ಮಾಹಿತಿ ಪಡೆದ ಸಚಿವರು, ಜಿಲ್ಲೆಯ ವಿವಿಧೆಡೆ ಬೆಳೆಗಳ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು.
ಒಂದೆಡೆ ಮಳೆಯ ಕೊರತೆ… ಮತ್ತೊಂದೆಡೆ ಕೈಗೆ ಬಂದ ಬೆಳೆಯ ಬಗ್ಗೆ ರೈತರ ಆತಂಕ… ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತರು ಎದುರು ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಸುಮಾರು 80 ಪ್ರತಿಶತ ಬಿತ್ತನೆಯಾಗಿದ್ದು, ಶೇ.14ರಷ್ಟು ಮಳೆ ಕೊರತೆ ಇದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಜೊತೆಗೆ ಈ ಬಾರಿ ಸುಮಾರು 2.5 ಲಕ್ಷ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು, ಬೆಳೆ ಹಾನಿಯಾದರೆ ವಿಮೆ ಸೇರಿದಂತೆ ಸಾಧ್ಯವಾದಷ್ಟು ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇನ್ನೂ ರೈತನ ಕಣ್ಣೆದುರೇ ಬೆಳೆ ಬೆಳೆಯಬೇಕು… ಕೈ ತುಂಬ ಫಸಲು ಬರಬೇಕು… ಕುಟುಂಬದ ಬದುಕು ಹಸನಾಗಬೇಕು ಎನ್ನುವ ಕನಸು. ಆದರೆ ಮಳೆ ಕೈಕೊಟ್ಟರೆ ಈ ಕನಸುಗಳೆಲ್ಲವೂ ಮಣ್ಣಾಗುವ ಆತಂಕ ಅನ್ನದಾತನನ್ನು ಕಾಡುತ್ತಿದೆ. ಹಿಟ್ಟಿನಹಳ್ಳಿಯಲ್ಲಿ ಸಚಿವರು ಪರಿಶೀಲನೆ ನಡೆಸಿ ರೈತರಿಗೆ ಪರಿಹಾರದ ಭರವಸೆ ನೀಡಿರುವುದು ಸದ್ಯಕ್ಕೆ ಅನ್ನದಾತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಇನ್ನೂ ಬರಗಾಲದ ಪರಿಸ್ಥಿತಿ ಎದುರಾದರೆ ಕೇಂದ್ರ ಸರ್ಕಾರದಿಂದ ಬರ ಘೋಷಣೆ ಪ್ರಕ್ರಿಯೆ ಆಗಸ್ಟ್ ಅಂತ್ಯದ ವೇಳೆಗೆ ನಡೆಯುವ ಸಾಧ್ಯತೆ ಇದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಅಷ್ಟರೊಳಗೆ ರೈತರು ಸಂಕಷ್ಟಕ್ಕೆ ಸಿಲುಕದಂತೆ ತಾತ್ಕಾಲಿಕ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಬರಗಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಚಿವರೊಂದಿಗೆ ಇದ್ದರು. ಒಟ್ಟಾರೆ ಸಚಿವರ ಭರವಸೆ ಇದೀಗ ನೆರವಿನ ನಿರೀಕ್ಷೆ ಮೂಡಿಸಿದೆ.

Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ