ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡಿ ಗೆಲ್ಲಿಸಿದ ಮತದಾರರಿಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಇದು ನಮ್ಮ ಸರ್ಕಾರದ ಸಾಧನೆಗಳಿಗೆ ಮತ್ತು ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಸಿಕ್ಕ ಜಯವಾಗಿದೆ. ವಿರೋಧ ಪಕ್ಷಗಳ ಅಪಪ್ರಚಾರ ಮತ್ತು ಹಣದ ಪ್ರಭಾವದ ಹೊರತಾಗಿಯೂ ಎರಡೂ ಕ್ಷೇತ್ರಗಳ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ್ದಾರೆ.
ಈ ಎರಡೂ ಕ್ಷೇತ್ರಗಳ ಮತದಾರರಷ್ಟೇ ಅಲ್ಲ ಇಡೀ ರಾಜ್ಯದ ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ರಾಜ್ಯದ ಮತದಾರರು ಇದೇ ರೀತಿ ನಮ್ಮನ್ನು ಹರಸುತ್ತಾರೆ ಎಂಬ ನಂಬಿಕೆ ನಮಗೆ ಇದೆ. ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ. ಎರಡು ರಾಜ್ಯಗಳ ಮತದಾರರನ್ನು ದೇಶದ ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಜನರ ಪರವಾಗಿ ಅಭಿನಂದಿಸುತ್ತೇನೆ.
ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದ ಕಾರ್ಯತಂತ್ರದ ವರೆಗೆ ಎಲ್ಲವನ್ನೂ ಆ ರಾಜ್ಯದ ಕಾಂಗ್ರೆಸ್ ನಾಯಕರು ಸಂಘಟಿತರಾಗಿ ನಡೆಸಿದ್ದಾರೆ. ಕೇರಳ ರಾಜ್ಯದೊಂದಿಗೆ ವಿಶೇಷವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಶೀಘ್ರದಲ್ಲಿಯೇ ಕೇರಳ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. ಕರ್ನಾಟಕದ ಜೊತೆಯಲ್ಲಿ ಕೇರಳ ರಾಜ್ಯದಲ್ಲಿ ಕೂಡಾ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಇಡೀ ದೇಶಕ್ಕೆ ರೋಲ್ ಮಾಡೆಲ್ ಆಗಿರುವ ಆಡಳಿತವನ್ನು ನೀಡಲಿದೆ ಎಂಬ ನಂಬಿಕೆ ನಮಗಿದೆ. ನೆರೆಯ ರಾಜ್ಯವಾದ ಕೇರಳದಲ್ಲಿ ಪಕ್ಷದ ಗೆಲುವು ಕರ್ನಾಟಕದ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸಿದೆ ಎಂದು ಹೇಳಿಕೊಂಡಿದ್ದಾರೆ.
Laxmi News 24×7