ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕ್ಷೇತ್ರ ಪುನರ್‌ವಿಂಗಡಣೆಗಾಗಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆ ಮಂಡನೆಯಾಗಿದೆ. ಜನಗಣತಿ ಆಧಾರದಡಿ ಕ್ಷೇತ್ರಗಳ ಗಡಿ ನಿರ್ಧರಿಸುವ ಪ್ರಕ್ರಿಯೆ ಇದಾಗಿದೆ.
ಜನಸಂಖ್ಯೆ ಮೂಲಕ ಸಮಾನ ಪ್ರತಿನಿಧಿತ್ವ ಒದಗಿಸುವುದು ಇದರ ಉದ್ದೇಶವಾಗಿದೆ. ಸಂವಿಧಾನದ 82 ಹಾಗೂ 170ನೇ ವಿಧಿ ಪ್ರಕಾರ, ಪ್ರತಿ ಜನಗಣತಿಯ ನಂತರ ಈ ಪ್ರಕ್ರಿಯೆ ನಡೆಯಬೇಕು. ಆದ್ರೆ, ಕುಟುಂಬ ನಿಯಂತ್ರಣ ನೀತಿಗೆ ಉತ್ತೇಜನ ಕೊಡೋ ಸಲುವಾಗಿ 2001ರ ನಂತರ ಕ್ಷೇತ್ರ ಮರು ವಿಂಗಡಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಲಿದೆ ಅನ್ನೋ ವಾದವನ್ನ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಅಲ್ಲಗಳೆದಿದ್ದಾರೆ.
ಇನ್ನೂ ಕ್ಷೇತ್ರ ಪುನರ್ವಿಂಗಡಣೆ ಕುರಿತಾದ ಚರ್ಚೆ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ (Tejasvi Surya), ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಯಾವ ಆಧಾರದ ಮೇಲೆ ನಡೆಸಬೇಕೆಂದು ನೀವು ಬಯಸುತ್ತೀರಿ? ಶ್ರೀಮಂತರಿಗೆ ಹೆಚ್ಚಿನ ಮತಗಳು ಇರುತ್ತವೆ, ಬಡವರಿಗೆ ಮತಗಳೇ ಇರುವುದಿಲ್ಲವೇ? ನಿಮ್ಮ ಈ ವಾದ ಮುಕೇಶ್ ಅಂಬಾನಿಗೆ (Mukesh Ambani) 1 ಲಕ್ಷ ಮತಗಳಿರುತ್ತೆ, ನಮ್ಮಂಥವರಿಗೆ ಒಂದೇ ಮತ ಇರುತ್ತವೇ ಅಂತಲೇ? ಕಾಂಗ್ರೆಸ್‌ನ ತರ್ಕ ಇದೇನಾ? ವಿಪಕ್ಷಗಳ ಈ ಅರ್ಥಹೀನ ಚರ್ಚೆ ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ದೋಷಪೂರಿತ ಎಂದು ಕಿಡಿಕಾರಿದರು.
ಇನ್ನೂ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತವೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, ದಕ್ಷಿಣ ಭಾರತಕ್ಕೆ ಅನ್ಯಾಯ ಆಗಲ್ಲ. ಮೂರು ಮಸೂದೆಗಳನ್ನು ಸಂಪೂರ್ಣವಾಗಿ ನೋಡಿದ್ದೇನೆ, ನಾನಿದನ್ನು ಬಿಜೆಪಿ ಸದಸ್ಯನಾಗಿ ಹೇಳುತ್ತಿಲ್ಲ. ಇದಕ್ಕಿಂತ ಉತ್ತಮ ಡೀಲ್ ದಕ್ಷಿಣಕ್ಕೆ ಸಿಗುತ್ತಿರಲಿಲ್ಲ. ದಕ್ಷಿಣಕ್ಕೆ ಅನ್ಯಾಯವಾಗಿದ್ದರೆ `ಹೆಮ್ಮೆಯ ಕನ್ನಡಿಗ’ನಾಗಿ ನಾನು ವಿರೋಧಿಸುತ್ತಿದ್ದೆ. ದಕ್ಷಿಣಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ ಎಂದು ತಿವಿದರು
Laxmi News 24×7